TOP NEWS

Sandalwood: ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಮನೆಗೆ ಪುಟ್ಟ ಕೃಷ್ಣನ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಹರ್ಪಿಕಾ ಪೂಣಚ್ಚ

Double Celebration sandalwood actress Harshika Poonacha and Bhuvan Ponnanna Blessed With a Baby Boy on Krishna Janmashtami

ಬೆಂಗಳೂರು: ಸ್ಯಾಂಡಲ್‌ವುಡ್‌ನ (Sandalwood) ಜನಪ್ರಿಯ ಹಾಗೂ ಮಾದರಿ ದಂಪತಿಗಳಲ್ಲೊಬ್ಬರಾದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ ಕೌಟುಂಬಿಕ ಜೀವನದ ಮತ್ತೊಂದು ಸುಂದರ ಹಂತಕ್ಕೆ ಕಾಲಿಟ್ಟಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ಈ ದಂಪತಿ ತಮ್ಮ ಎರಡನೇ ಮಗುವನ್ನು (ಗಂಡು ಮಗು) ಪ್ರೀತಿಯಿಂದ ಜಗತ್ತಿಗೆ ಸ್ವಾಗತಿಸಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಖುಷಿಯ ಕ್ಷಣ ಹಂಚಿಕೊಂಡ ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಕಂದನ ಬೆರಳನ್ನು ಹಿಡಿದುಕೊಂಡಿರುವ ಮುದ್ದಾದ ಫೋಟೋ ಪೋಸ್ಟ್ ಮಾಡಿರುವ ದಂಪತಿ, “ಕೃಷ್ಣನು ಈ ಜನ್ಮಾಷ್ಟಮಿಯ ಶುಭ ತಸಮಯದಲ್ಲಿ ನಮ್ಮ ಪ್ರಾರ್ಥನೆಗಳನ್ನು ಆಲಿಸಿದ್ದಾನೆ. ನಮ್ಮ ಮನೆಗೆ ಚೋಟಾ ಕೃಷ್ಣನ ಆಗಮನವಾಗಿದ್ದು, ನಮ್ಮ ತೋಳುಗಳು ಮತ್ತು ಹೃದಯ ಸಂತಸದಿಂದ ತುಂಬಿ ತುಳುಕುತ್ತಿವೆ. ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಈ ವರ್ಷದ ಮಾರ್ಚ್ 31ರಂದು ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಪ್ಯಾರಿಸ್ ಪ್ರವಾಸದ ವೇಳೆ ಈ ಜೋಡಿ ಬಹಿರಂಗಪಡಿಸಿತ್ತು. ಇತ್ತೀಚೆಗಷ್ಟೇ ನಟಿ ಹರ್ಷಿಕಾ ಪೂಣಚ್ಚ ತಮ್ಮ ಬೇಬಿಬಂಪ್ ಫೋಟೋಗಳನ್ನು ಹಂಚಿಕೊಂಡು, “ಕೃಷ್ಣನ ಕೊಳಲ ನಾದಕ್ಕಾಗಿ ಕಾಯುತ್ತಿರುವ ರಾಧಾರಾಣಿಯಂತೆ ನಾನು ನನ್ನ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದೇನೆ,” ಎಂದು ಬರೆದುಕೊಂಡಿದ್ದರು. ಇದೀಗ ಅದೇ ಕೃಷ್ಣ ಜನ್ಮಾಷ್ಟಮಿಯಂದೇ ಮಗು ಜನಿಸಿರುವುದು ಈ ಕುಟುಂಬದ ಸಂತಸವನ್ನು ದ್ವಿಗುಣಗೊಳಿಸಿದೆ.

ಪ್ರೀತಿಯ ಪಯಣ ಮತ್ತು ಮೊದಲ ಮಗಳು

ಸುಮಾರು 10 ವರ್ಷಗಳ ಸುದೀರ್ಘ ಸ್ನೇಹದ ನಂತರ, ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ 2023ರ ಆಗಸ್ಟ್ 24ರಂದು ಕೊಡಗಿನ ವಿರಾಜಪೇಟೆಯಲ್ಲಿ ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2024ರ ಅಕ್ಟೋಬರ್‌ನಲ್ಲಿ ಈ ದಂಪತಿಗೆ ಮೊದಲ ಹೆಣ್ಣು ಮಗು ಜನ್ಮತಾಳಿತ್ತು. ಆ ಮಗುವಿಗೆ ಜ್ಞಾನ, ಸಂಪತ್ತು ಮತ್ತು ಶಕ್ತಿಯ ಸಂಕೇತವಾಗಿ ‘ತ್ರಿದೇವಿ ಪೊನ್ನಕ್ಕ’ ಎಂದು ಅರ್ಥಪೂರ್ಣವಾಗಿ ಹೆಸರಿಡಲಾಗಿತ್ತು.

ಕೇವಲ 8 ತಿಂಗಳ ಮಗುವಿದ್ದಾಗ 3 ದೇಶಗಳು, 8 ವಿಮಾನ ಪ್ರಯಾಣಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಪ್ರವಾಸ ಮಾಡಿ ಈ ಜೋಡಿ ಗಮನ ಸೆಳೆದಿತ್ತು. ಈಗ ಮೂವರಿದ್ದ ಕುಟುಂಬ ನಾಲ್ಕಕ್ಕೆ ವಿಸ್ತರಣೆಯಾಗಿದ್ದು, ಮೊದಲ ಮಗಳಿಗೆ ಅರ್ಥಪೂರ್ಣ ಹೆಸರಿಟ್ಟಿದ್ದ ಈ ಜೋಡಿ ತಮ್ಮ ‘ಚೋಟಾ ಕೃಷ್ಣ’ನಿಗೆ ಯಾವ ವಿಶೇಷ ಹೆಸರನ್ನಿಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ನಾನು ವಿಷಕಂಠ, ಎಲ್ಲವನ್ನೂ ನುಂಗಿಕೊಳ್ಳುತ್ತೇನೆ: ಕುಟುಂಬದ ವಿವಾದಗಳ ಬಗ್ಗೆ ಮೌನ ಮುರಿದ ದುನಿಯಾ ವಿಜಯ್

Leave a Reply

Your email address will not be published. Required fields are marked *