ಬೆಂಗಳೂರು: ಗೌತಮ್ ಅದಾನಿ ಅವರೊಂದಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿ ಸಭೆ ನಡೆದಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ವಿರೋಧ ಪಕ್ಷವಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಾಡುತ್ತಿರುವ ಟೀಕೆಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ನಮಗೆ ನಿಯಮಗಳು ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಯಷ್ಟೇ ಮುಖ್ಯ. ನಮ್ಮ ಪಾಲಿಗೆ ಅದಾನಿ ಎನ್ನುವವರು ಕೇವಲ ಒಬ್ಬ ಗುತ್ತಿಗೆದಾರ ಅಥವಾ ಕಾಂಟ್ರಾಕ್ಟರ್ ಅಷ್ಟೇ ಎಂದು ಖರ್ಗೆ ಬಹಳ ಸ್ಪಷ್ಟವಾಗಿ ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರದ ಕೆಲಸಗಳು ಕಾನೂನಿನಂತೆ ನಡೆಯಬೇಕಾಗುತ್ತದೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜಕೀಯವಾಗಿ ಅಥವಾ ವ್ಯಕ್ತಿಗತವಾಗಿ ಅದಾನಿ ಅವರ ಬಗ್ಗೆ ನಮ್ಮ ಪಕ್ಷಕ್ಕೆ ಬೇರೆಯದೇ ಅಭಿಪ್ರಾಯಗಳಿರಬಹುದು. ಆದರೆ, ಸರ್ಕಾರದ ಕಾರ್ಯಾಚರಣೆ ಹಾಗೂ ಅಧಿಕೃತ ಪ್ರಕ್ರಿಯೆಗಳಲ್ಲಿ ಇಂತಹ ವೈಯಕ್ತಿಕ ಅಭಿಪ್ರಾಯಗಳನ್ನು ತರಲು ಸಾಧ್ಯವಿಲ್ಲ. ಯಾವುದೇ ಪ್ರಮುಖ ಯೋಜನೆಯಲ್ಲಿ ಸರ್ಕಾರದ ಕೆಲಸಗಳು ಕಾನೂನಿನಂತೆ ನಡೆಯಬೇಕಾಗುತ್ತದೆ. ಉದಾಹರಣೆಗೆ, ನನ್ನ ಸ್ವಕ್ಷೇತ್ರವಾದ ಚಿತ್ತಾಪುರದಲ್ಲಿರುವ ಏಷ್ಯಾದಲ್ಲೇ ಅತಿ ದೊಡ್ಡ ಕ್ಲಿಂಕರ್ ಪ್ಲಾಂಟ್ ಹೊಂದಿರುವ ಸಿಸಿಐ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಗ್ರೂಪ್ ವಶಪಡಿಸಿಕೊಂಡಿದೆ. ಹೀಗಿರುವಾಗ ಉದ್ಯಮಿಗಳು ಮುಖ್ಯಮಂತ್ರಿಗಳನ್ನು ಅಥವಾ ಸಚಿವರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪು ಕಾಣಿಸುವುದಿಲ್ಲ ಎಂದು ತಿಳಿಸಿದರು.
#Karnataka #Breaking
— Mahesh M Goudar (@IamMGoudar) August 24, 2026
‘For Us, Adani Is Nothing But a Contractor’: Priyank Kharge Defends CM’s Meeting with Adani
Home Minister @PriyankKharge has defended Chief Minister @DKShivakumar’s meeting with businessman @gautam_adani, which has drawn criticism from the @BJP4Karnataka,… pic.twitter.com/YtzoiA7HmI
ಸರ್ಕಾರ ಯಾವುದೇ ಸಂಸ್ಥೆಗೆ ಅಥವಾ ವ್ಯಕ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ವಿಶೇಷ ರಿಯಾಯಿತಿ ನೀಡಿಲ್ಲ ಎಂಬುದನ್ನು ಖರ್ಗೆ ಪುನರುಚ್ಚರಿಸಿದರು. ಟೆಂಡರ್‌ನಲ್ಲಿ ಯಾರು ಅತ್ಯಂತ ಕಡಿಮೆ ದರ (L1) ನಮೂದಿಸುತ್ತಾರೋ ಅವರಿಗೆ ನಿಯಮಾವಳಿಗಳ ಪ್ರಕಾರವೇ ಕೆಲಸ ಸಿಗುತ್ತದೆ. ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಮತ್ತು ಮಾಡಲು ಸಾಧ್ಯವೂ ಇಲ್ಲ. ಅರ್ಹತೆ ಇರುವ ಯಾವುದೇ ಕಂಪನಿಯು ಟೆಂಡರ್‌ನಲ್ಲಿ ಭಾಗವಹಿಸುವುದನ್ನು ತಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಅದಾನಿ ಕಂಪನಿಯು ಪಾರದರ್ಶಕ ನಿಯಮಗಳಡಿಯಲ್ಲೇ ಎಲ್1 ಆಗಿ ಹೊರಹೊಮ್ಮಿದೆ. ಒಂದು ವೇಳೆ ನಾವು ನಿಯಮ ಬದಿಗೊತ್ತಿ ಬೇರೆಯವರಿಗೆ ಯೋಜನೆ ಕೊಟ್ಟಿದ್ದರೆ, ಆಗ ಮಾಧ್ಯಮಗಳು ಮತ್ತು ವಿರೋಧ ಪಕ್ಷದವರು ಅದನ್ನೇ ದೊಡ್ಡ ಹಗರಣ ಎಂದು ಬಿಂಬಿಸುತ್ತಿದ್ದರು ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರ ಅದಾನಿ ಮತ್ತು ಅಂಬಾನಿ ಹಿತಾಸಕ್ತಿಗಷ್ಟೇ ಕೆಲಸ ಮಾಡುತ್ತಿದೆ
ಇದೇ ವೇಳೆ ಬಿಜೆಪಿಯ ದ್ವಿಮುಖ ನೀತಿಯನ್ನು ತೀವ್ರವಾಗಿ ತೊಳೆಯ ಹೊರಟ ಖರ್ಗೆ, ಕೇಂದ್ರ ಸರ್ಕಾರವು ಅದಾನಿ ಮತ್ತು ಅಂಬಾನಿ ಅವರ ಹಿತಾಸಕ್ತಿಗಷ್ಟೇ ಕೆಲಸ ಮಾಡುತ್ತಿದೆ ಎನ್ನುವ ಕಾಂಗ್ರೇಸ್ ಪಕ್ಷದ ಸಿದ್ಧಾಂತ ಹಾಗೂ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ರಾಜ್ಯದಲ್ಲಿ ಕಾನೂನಾತ್ಮಕವಾಗಿ ನಡೆಯುವ ಪ್ರಕ್ರಿಯೆಯನ್ನು ನಾವು ತಡೆಯಲು ಬರುವುದಿಲ್ಲ ಎಂದರು. ಅದಾನಿ ಇರಲಿ, ಅಂಬಾನಿ ಇರಲಿ ಅಥವಾ ಇನ್ಯಾರೇ ಇರಲಿ, ನಿಗದಿತ ಸಮಯದಲ್ಲಿ ಕೆಲಸ ಮುಗಿದು ಜನರಿಗೆ ಅನುಕೂಲವಾಗುವುದಷ್ಟೇ ಸರ್ಕಾರದ ಆದ್ಯತೆ.
ಬೆಂಗಳೂರಿನ ಬಹುನಿರೀಕ್ಷಿತ ಟನಲ್ ರಸ್ತೆ ಯೋಜನೆಯ ಬಗ್ಗೆಯೂ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ನಾಯಕರು ಹಾಗೂ ಸಂಸದರು ಇದೇ ಯೋಜನೆಯನ್ನು ತೀವ್ರವಾಗಿ ಪ್ರಶ್ನಿಸಿ ನಮ್ಮ ಮೇಲೆ ಮುಗಿಬಿದ್ದಿದ್ದರು. ಈಗ ಅದೇ ಯೋಜನೆಯ ಟೆಂಡರ್ ಅನ್ನು ಅವರದೇ ಆತ್ಮೀಯರಂತಿರುವ ಅದಾನಿ ಸಂಸ್ಥೆ ಪಡೆದುಕೊಂಡಿದೆ. ಈಗ ಬಿಜೆಪಿಯ ನಿಲುವೇನು? ಅವರಿಗೆ ಈ ಬೆಂಗಳೂರು ಟನಲ್ ರಸ್ತೆ ಯೋಜನೆ ಜಾರಿಯಾಗುವುದು ಬೇಕೋ ಬೇಡವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು. ನಿಯಮಬದ್ಧವಾಗಿ ಕೆಲಸ ಮಾಡುವಾಗ ರಾಜಕೀಯವನ್ನು ದೂರವಿಟ್ಟು ರಾಜ್ಯದ ಹಿತಾಸಕ್ತಿಗೆ ಒತ್ತು ನೀಡುವುದಾಗಿ ಪ್ರಿಯಾಂಕ್ ಖರ್ಗೆ ಖಡಕ್ ಆಗಿ ನುಡಿದರು.
ಇದನ್ನೂ ಓದಿ: ನಕಲಿ ಔಷಧ ಮಾಫಿಯಾ ಮತ್ತು ಕಳಪೆ ಆಹಾರಕ್ಕೆ ಶೀಘ್ರವೇ ಬೀಳಲಿದೆ ಬ್ರೇಕ್
