ಅಮೆರಿಕ: ಇರಾನ್ ವಿರುದ್ಧ ಬೃಹತ್ ಪ್ರಮಾಣದ ಮಿಲಿಟರಿ ದಾಳಿ ನಡೆಸುವ ಕುರಿತು ತಾವು ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶುಕ್ರವಾರ ತಿಳಿಸಿದ್ದಾರೆ. ವಾಷಿಂಗ್ಟನ್‌ನೊಂದಿಗೆ ನಡೆಯುತ್ತಿರುವ ಮಾತುಕತೆಯಲ್ಲಿ ಟೆಹ್ರಾನ್ (ಇರಾನ್) ಈಗ ಹೆಚ್ಚು ‘ಗಂಭೀರತೆ’ ತೋರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಇರಾನ್ ಮೇಲೆ ಬೃಹತ್ ದಾಳಿಗೆ ಟ್ರಂಪ್ ತಮ್ಮ ಹಿರಿಯ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ಫಲಿತಾಂಶ ಏನೆಂಬುದನ್ನು ಕಾಯ್ದು ನೋಡುತ್ತೇವೆ
ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾವು ಪ್ರಸ್ತುತ ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ದಿನಗಳು ಕಳೆದಂತೆ ಅವರು ಮಾತುಕತೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂಬುದು ನನ್ನ ಭಾವನೆ. ಒಪ್ಪಂದಕ್ಕೆ ಬರುವುದು ಅಥವಾ ಅತ್ಯಂತ ತೀವ್ರ ಸ್ವರೂಪದ ದಾಳಿಯನ್ನು ಎದುರಿಸುವುದು ಎಂಬ ಎರಡು ಆಯ್ಕೆಗಳು ಇರಾನ್ ಮುಂದಿವೆ. ಅಮೆರಿಕ ಎಲ್ಲಾ ರೀತಿಯಿಂದಲೂ ದಾಳಿಗೆ ಸಿದ್ಧವಾಗಿದೆ (ಲಾಕ್ಡ್ ಅಂಡ್ ಲೋಡೆಡ್), ಆದರೆ ಮಾತುಕತೆ ನಡೆಯುತ್ತಿರುವಾಗ ಅದರ ಫಲಿತಾಂಶ ಏನೆಂಬುದನ್ನು ಕಾಯ್ದು ನೋಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
5 ನೇ ತಿಂಗಳತ್ತ ತಲುಪಿದ ಸಂಘರ್ಷ
ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚದಂತೆ ತಡೆಯಲು ಅಮೆರಿಕ ಈ ದಾಳಿಗಳನ್ನು ನಡೆಸುತ್ತಿದ್ದು, ಪ್ರತಿಯಾಗಿ ಇರಾನ್ ನಡೆಸಿದ ದಾಳಿಯಲ್ಲಿ ನಾಲ್ವರು ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ. ಸುಮಾರು 4 ರಿಂದ 5 ವಾರಗಳಲ್ಲಿ ಮುಗಿಯಬಹುದು ಎಂದು ಅಂದಾಜಿಸಲಾಗಿದ್ದ ಈ ಸಂಘರ್ಷ ಈಗ 5 ನೇ ತಿಂಗಳತ್ತ ತಲುಪಿದ್ದು, ಮುಂಬರುವ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಟ್ರಂಪ್ ಅವರ ಜನಪ್ರಿಯತೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಇರಾನ್ ಅಣ್ವಸ್ತ್ರ ತಯಾರಿಕೆಯ ಹಂತ ತಲುಪಿದರೆ ಅದು ತಮ್ಮ ಕೆಂಪು ಗೆರೆಯನ್ನು ದಾಟಿದಂತೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಇದೇ ವೇಳೆ, ಚೀನಾ ಮತ್ತು ರಷ್ಯಾ ದೇಶಗಳು ಇರಾನ್‌ಗೆ ಆಯುಧಗಳನ್ನು ಪೂರೈಸುತ್ತಿಲ್ಲ ಎಂಬ ನಂಬಿಕೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಇರಾನ್‌ಗೆ ಅಸ್ತ್ರಗಳನ್ನು ನೀಡುವುದಿಲ್ಲ ಎಂದು ತಮಗೆ ಭರವಸೆ ನೀಡಿದ್ದು, ಆ ನಾಯಕರ ಮಾತುಗಳನ್ನು ತಾವು ನಂಬುವುದಾಗಿ ಹೇಳಿದ್ದಾರೆ. ಒಂದು ವೇಳೆ ಈ ದೇಶಗಳು ಇರಾನ್‌ಗೆ ಆಯುಧ ಮಾರಾಟ ಮಾಡಿದರೆ ಅದು ಅವರಿಗೆ ಖಂಡಿತ ಶ್ರೇಯಸ್ಕರ ಅಲ್ಲ ಎಂದೂ ಟ್ರಂಪ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ನೀಟ್ ಆಂದೋಲನ ಹೆಸರಲ್ಲಿ ಪಾಕ್ ಸಂಚು: 400ಕ್ಕೂ ಹೆಚ್ಚು ಖಾತೆಗಳು ಬ್ಲಾಕ್!
