ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic) ಸಿನಿಮಾದ ಎರಡನೇ ಹಾಡು ಇಂದು (ಜುಲೈ 21) ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ‘ತಬಾಹಿ’ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜೊತೆ ಅಬ್ಬರಿಸಿದ್ದ ಯಶ್, ಇದೀಗ ಬಿಡುಗಡೆಯಾಗಿರುವ ‘ಮನಮೋಹಕ’ ಎಂಬ ಪ್ರೇಮಗೀತೆಯಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ಹೊಸ ಹಾಡನ್ನು ನೋಡಿದ ಸಿನಿಪ್ರೇಮಿಗಳು ಯಶ್ ಅವರ ಕೆರಿಯರ್‌ನ ಆರಂಭದ ಸೂಪರ್ ಹಿಟ್ ಚಿತ್ರ ‘ಕಿರಾತಕ’ವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳಿಂದ ಮೆಚ್ಚುಗೆ
ಅದ್ದೂರಿ ಮೇಕಿಂಗ್ ಹಾಗೂ ರೊಮ್ಯಾಂಟಿಕ್ ದೃಶ್ಯಗಳಿಂದ ಕಣ್ಮನ ಸೆಳೆಯುತ್ತಿರುವ ‘ಮನಮೋಹಕ’ ಸಾಂಗ್‌ಗೆ ದೇಶಾದ್ಯಂತ ರಾಕಿ ಭಾಯ್ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹಾಡಿನಲ್ಲಿ ಯಶ್ ಅವರ ರಗಡ್ ಹಾಗೂ ಸ್ಟೈಲಿಶ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮೊದಲ ಸಾಂಗ್‌ನಂತೆ ಈ ಮೆಲೋಡಿ ಟ್ರ್ಯಾಕ್ ಕೂಡ ರಿಚ್ ಆಗಿ ಮೂಡಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
ಈ ಹಾಡಿನಲ್ಲಿ ಬರುವ ಒಂದು ನಿರ್ದಿಷ್ಟ ಮಾಸ್ ಸೀನ್ ಈಗ ಸಿನಿಪ್ರೇಮಿಗಳ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾಡಿನ ಕೊನೆಯಲ್ಲಿ ಯಶ್ ಅವರು ಕಾರಿನ ಮೇಲೆ ಕುಳಿತಿರುವಾಗ ಅವರ ಸುತ್ತ ಸ್ನೇಹಿತರ ಹಿಂಡೇ ನೆರೆದಿರುತ್ತದೆ. ಆಗ ನಾಯಕಿ ತಾರಾ ಸುತಾರಿಯಾ ಅಲ್ಲಿಗೆ ಬಂದ ತಕ್ಷಣ, ಯಶ್ ತಮ್ಮ ಕೈಲಿದ್ದ ಗನ್‌ನಿಂದ ನೆಲಕ್ಕೆ ಶೂಟ್ ಮಾಡಿ ಸುತ್ತಲಿದ್ದ ಗೆಳೆಯರನ್ನೆಲ್ಲಾ ದೂರ ಓಡಿಸುತ್ತಾರೆ. ತದನಂತರ ನಾಯಕಿಯನ್ನು ಹತ್ತಿರ ಸೆಳೆದು ಅಪ್ಪಿಕೊಳ್ಳುತ್ತಾರೆ.
ಕಿರಾತಕನ ನೆನಸಿಕೊಂಡ ಫ್ಯಾನ್ಸ್
ಈ ದೃಶ್ಯವನ್ನು ನೋಡಿದ ತಕ್ಷಣ ಅಭಿಮಾನಿಗಳಿಗೆ ಯಶ್ ಅವರ ಹಳೇ ಸಿನಿಮಾ ‘ಕಿರಾತಕ’ ಕಣ್ಣಮುಂದೆ ಬಂದಿದೆ. ಆ ಚಿತ್ರದಲ್ಲೂ ನಾಯಕಿಯ ಊರಿನ ಆರ್ಕೆಸ್ಟ್ರಾ ಕಾರ್ಯಕ್ರಮದ ವೇಳೆ, ಆಕೆಯ ಜೊತೆ ಒಂಟಿಯಾಗಿ ಮಾತನಾಡಲು ಯಶ್ ತಮ್ಮ ಇಡೀ ಗ್ಯಾಂಗ್ ಅನ್ನು ಇದೇ ಮಾದರಿಯಲ್ಲಿ ಹೆದರಿಸಿ ಓಡಿಸುವ ಮಜಾವಾದ ದೃಶ್ಯವಿತ್ತು. ಈಗ ವರ್ಷಗಳ ನಂತರ ಜಾಗತಿಕ ಮಟ್ಟದ ‘ಟಾಕ್ಸಿಕ್’ ಸಿನಿಮಾದಲ್ಲೂ ಅದೇ ಶೈಲಿಯ ಮಾಸ್ ಮತ್ತು ರೊಮ್ಯಾಂಟಿಕ್ ಎಲಿಮೆಂಟ್ ಮರುಕಳಿಸಿರುವುದು ಅಭಿಮಾನಿಗಳಿಗೆ ಹಳೇ ನೆನಪುಗಳನ್ನು ಗಿಟುಕುವಂತೆ ಮಾಡಿದೆ.
ಇದನ್ನೂ ಓದಿ: ಆರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರಿಗೆ ಸಲ್ಮಾನ್ ಖಾನ್ ಟಾಂಗ್
