ಬೆಂಗಳೂರು: ಭಾರತೀಯರು ಅತಿಥಿ ಸತ್ಕಾರಕ್ಕೆ ಮತ್ತು ವಿಶಾಲ ಹೃದಯಕ್ಕೆ ಹೆಸರುವಾಸಿ. ನಮ್ಮ ದೇಶಕ್ಕೆ ಬರುವ ಪ್ರವಾಸಿಗರನ್ನು ಪ್ರೀತಿಯಿಂದ ಬರಮಾಡಿಕೊಂಡು ಗೌರವಿಸುವುದು (Viral Video) ನಮ್ಮ ಸಂಸ್ಕೃತಿ. ಭಾರತೀಯರ ಈ ಉದಾತ್ತ ಗುಣಕ್ಕೆ ವಿದೇಶಿಗರು ಮನಸೋತ ಹಲವು ಉದಾಹರಣೆಗಳಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ಭಾರತದ ಬೀದಿ ಬದಿ ವ್ಯಾಪಾರಿಯೊಬ್ಬರು ವಿದೇಶಿ ಮಹಿಳೆಗೆ ಪ್ರೀತಿಯಿಂದ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರ ಮನ ಗೆಲ್ಲುತ್ತಿದೆ.
ಹಣ ಬೇಡ, ನನ್ನ ಕಡೆಯಿಂದ ಗಿಫ್ಟ್!
‘ಓಲಾ ಲಿಲ್ಲಿ’ (Ola Lily) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಭಾರತದ ಮಾರುಕಟ್ಟೆಯೊಂದರ ಬೀದಿಯಲ್ಲಿ ಸುತ್ತಾಡುತ್ತಾ ಕಿವಿಯೋಲೆಗಳನ್ನು ನೋಡುತ್ತಿರುತ್ತಾರೆ. ಈ ವೇಳೆ ವ್ಯಾಪಾರಿ ತಮಗೆ ಇಷ್ಟವಾದ ಒಂದು ಜೋಡಿ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಲು ಮುಂದೆ ಬರುತ್ತಾರೆ. ಮಹಿಳೆ ಇದರ ಬೆಲೆ ಎಷ್ಟು ಎಂದು ಕೇಳಿದಾಗ, ಆ ವ್ಯಾಪಾರಿ “ಇದಕ್ಕೆ ದುಡ್ಡು ಬೇಡ, ಇದು ನನ್ನ ಕಡೆಯಿಂದ ನಿಮಗೆ ಉಡುಗೊರೆ” ಎಂದು ನಗುತ್ತಾ ಹೇಳುತ್ತಾರೆ. ವ್ಯಾಪಾರಿಯ ಈ ನಿಷ್ಕಲ್ಮಶ ಪ್ರೀತಿಯನ್ನು ಕಂಡು ಆ ವಿದೇಶಿ ಮಹಿಳೆಯ ಆನಂದಕ್ಕೆ ಪಾರಾವೇ ಇರುವುದಿಲ್ಲ. ತಕ್ಷಣವೇ ಆಕೆ ಆ ಕಿವಿಯೋಲೆಯನ್ನು ಧರಿಸಿ ತನ್ನ ಸಂತಸವನ್ನು ವ್ಯಕ್ತಪಡಿಸುತ್ತಾಳೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ಯ ಭಾರಿ ಸದ್ದು ಮಾಡುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾರತೀಯ ವ್ಯಾಪಾರಿಯ ದೊಡ್ಡ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಬಳಕೆದಾರರೊಬ್ಬರು, “ಇಂತಹ ಹೃದಯವಂತಿಕೆಯ ಕ್ಷಣಗಳನ್ನು ಕೇವಲ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಭಾರತೀಯರು ನಿಜಕ್ಕೂ ವಿಶಾಲ ಹೃದಯಿಗಳು” ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಳಕೆದಾರರು ಆ ವಿದೇಶಿ ಮಹಿಳೆಯನ್ನು ಉದ್ದೇಶಿಸಿ, “ನಮ್ಮ ದೇಶದ ಪ್ರಜೆಗಳು ನಿಮ್ಮ ದೇಶಕ್ಕೆ ಬಂದಾಗಲೂ ನಿಮ್ಮವರು ಇದೇ ರೀತಿ ಪ್ರೀತಿಯಿಂದ ನಡೆಸಿಕೊಳ್ಳುವಂತೆ ಹೇಳಿ” ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.
