ಈಜಿಪ್ಟ್: ಫಿಫಾ ವಿಶ್ವಕಪ್‌ನ (FIFA World Cup) ಜಾಗತಿಕ ವೇದಿಕೆಯನ್ನು ಬಳಸಿಕೊಂಡಿರುವ ಈಜಿಪ್ಟ್ ಫುಟ್‌ಬಾಲ್ ತಂಡದ ಮುಖ್ಯ ತರಬೇತುದಾರ್ ಹೊಸಾಮ್ ಹಸನ್, ಗಜಾದಲ್ಲಿ ಪ್ಯಾಲೇಸ್ಟಿನಿಯನ್ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಪ್ಯಾಲೇಸ್ಟಿನಿಯನ್ನರ ಸಂಕಷ್ಟವನ್ನು “ವಿಶ್ವಕ್ಕೇ ನಾಚಿಕೆಗೇಡು” ಎಂದು ಬಣ್ಣಿಸಿರುವ ಅವರು, ಅವರ ಧ್ವನಿಯಾಗಲು ಫುಟ್‌ಬಾಲ್ ಸಂಸ್ಥೆಗಳು, ಕ್ರೀಡಾಪಟುಗಳು ಮತ್ತು ಮಾಧ್ಯಮಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಟ್ಲಾಂಟಾದಲ್ಲಿ ಅರ್ಜೆಂಟೀನಾ ವಿರುದ್ಧ ನಡೆಯಲಿರುವ ಈಜಿಪ್ಟ್‌ನ ಪ್ರಮುಖ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಸನ್, ಫುಟ್‌ಬಾಲ್ ವಿಷಯದಿಂದ ಕೊಂಚ ದೂರ ಸರಿದು ಪ್ಯಾಲೇಸ್ಟಿನಿಯನ್ನರ ಪರವಾಗಿ ಅತ್ಯಂತ ಭಾವುಕವಾಗಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಈಜಿಪ್ಟ್ ಸಾಧಿಸಿದ ಐತಿಹಾಸಿಕ ಪೆನಾಲ್ಟಿ ಶೂಟೌಟ್ ಗೆಲುವನ್ನು ಪ್ಯಾಲೇಸ್ಟಿನಿಯನ್ ಜನರಿಗೆ ಸಮರ್ಪಿಸಿದ್ದ ಹಸನ್, ಪಂದ್ಯದ ನಂತರ ಮೈದಾನದಲ್ಲಿ ಪ್ಯಾಲೇಸ್ಟಿನಿಯನ್ ಧ್ವಜವನ್ನು ಬೀಸಿದ್ದರು.
ಬೇಸರ ವ್ಯಕ್ತಪಡಿಸಿದ ಕೋಚ್
ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಸನ್, “ಪ್ಯಾಲೇಸ್ಟಿನಿಯನ್ ಜನರ ನೋವನ್ನು ಯಾರಾದರೂ ಅರ್ಥಮಾಡಿಕೊಳ್ಳದಿದ್ದರೆ, ಅವರಲ್ಲಿ ಮಾನವೀಯತೆಯೇ ಇಲ್ಲ ಎಂದರ್ಥ” ಎಂದು ಹೇಳಿದ್ದಾರೆ. ಈಜಿಪ್ಟ್ ತಂಡದ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರರಾಗಿರುವ ಮಾಜಿ ಸ್ಟ್ರೈಕರ್ ಹಸನ್, ಗಜಾ ಬಿಕ್ಕಟ್ಟು ಅಂತರರಾಷ್ಟ್ರೀಯ ಸಮುದಾಯದ ವೈಫಲ್ಯವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಅರಬ್ ಜಗತ್ತಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಮತ್ತು ಮುಖ್ಯವಾಗಿ ಮಾನವರನ್ನು ಸಂಕಷ್ಟಕ್ಕೆ ತಳ್ಳಿ ಕೈತೊಳೆದುಕೊಂಡಿರುವ ಜಾಗತಿಕ ನಿರ್ಧಾರ ಕೈಗೊಳ್ಳುವ ನಾಯಕರಿಗೆ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
Egypt's coach Hossam Hassan waved Palestine's flag on the pitch after defeating Australia.
— Incognito (@Incognito_qfs) July 7, 2026
Today, Messi stopped it from happening again.
The world owes Messi 🙏 pic.twitter.com/8GIYJ4Q8pS
ಜೀವನ ನಡೆಸಲು ಅವಕಾಶ ಕೊಡಿ
ಗಜಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದು, ವಿಶ್ವಸಂಸ್ಥೆ ಕೂಡ ಈ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಫುಟ್‌ಬಾಲ್‌ನ ಜಾಗತಿಕ ಜನಪ್ರಿಯತೆಯನ್ನು ಪ್ಯಾಲೇಸ್ಟಿನಿಯನ್ನರ ಪರ ಧ್ವನಿ ಎತ್ತಲು ಬಳಸಿಕೊಳ್ಳಬೇಕು ಎಂದು ಹಸನ್ ಕರೆ ನೀಡಿದ್ದಾರೆ. ಫುಟ್‌ಬಾಲ್ ಅನ್ನು ಒಂದು ಮೃದು ಶಕ್ತಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿರುವ ಅವರು, ವಿಶ್ವದಾದ್ಯಂತ ಇರುವ ಎಲ್ಲಾ ಮಾಧ್ಯಮಗಳು ಮತ್ತು ಕ್ರೀಡಾಪಟುಗಳು ತಮ್ಮ ಗುರುತುಗಳನ್ನು ಬದಿಗಿಟ್ಟು, ‘ಪ್ಯಾಲೇಸ್ಟಿನಿಯನ್ ಜನರನ್ನು ಮುಕ್ತವಾಗಿರಲು ಬಿಡಿ, ಅವರು ತಮ್ಮದೇ ಆದ ಜೀವನವನ್ನು ನಡೆಸಲು ಅವಕಾಶ ಕೊಡಿ’ ಎಂಬ ಒಂದೇ ಮಾನವೀಯ ಸಂದೇಶದೊಂದಿಗೆ ಒಂದಾಗಬೇಕು ಎಂದು ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? ರಾಜಸ್ಥಾನ್ ರಾಯಲ್ಸ್ ಜೊತೆ ಟ್ರೇಡ್ ಡೀಲ್?
