ಕೊಪ್ಪಳ: ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಸರ್ಕಾರದ ಆಡಳಿತಾತ್ಮಕ ಲೋಪಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತ ಎಂದಮೇಲೆ ತಪ್ಪುಗಳು ಸಹಜ ಎಂದು ಹೇಳುತ್ತಲೇ, ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ಸದ್ಯ ಎರಡು ಲಕ್ಷ ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಭತ್ಯೆ ತಲುಪುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ನೀಡಿದ್ದಾರೆ.
ಮೃತರ ಅಕೌಂಟ್‌ಗೂ ಜಮೆಯಾಗುತ್ತಿದೆ ಕಳ್ಳಹಣ! ಗ್ಯಾರಂಟಿ ಯೋಜನೆಗಳ ಅಂಕಿ-ಅಂಶಗಳನ್ನು ಹಂಚಿಕೊಂಡ ರಾಯರೆಡ್ಡಿ, “ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 1 ಕೋಟಿ 26 ಲಕ್ಷ ಮಹಿಳೆಯರಿಗೆ ಹಣ ನೀಡುವ ಗುರಿ ಇದೆ. ಆದರೆ ದಾಖಲೆಗಳ ದೋಷ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಪ್ರಸ್ತುತ 1 ಕೋಟಿ 24 ಲಕ್ಷ ಫಲಾನುಭವಿಗಳಿಗೆ ಮಾತ್ರ ಹಣ ತಲುಪುತ್ತಿದೆ. ಸರ್ಕಾರ ಪ್ರತಿ ತಿಂಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ₹2,500 ಕೋಟಿ ಹಣವನ್ನು ಜನರ ಖಾತೆಗೆ ಜಮೆ ಮಾಡುತ್ತಿದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ಪರಿಷ್ಕರಣೆಗೆ ಮುಖ್ಯ ಕಾರಣವೇನೆಂದರೆ, ರಾಜ್ಯದಲ್ಲಿ ಹಲವು ಮಹಿಳೆಯರು ಮೃತಪಟ್ಟಿದ್ದರೂ ಅವರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯಡಿ 1 ಕೋಟಿ 68 ಲಕ್ಷ ಜನರಿಗೆ ಉಚಿತ ವಿದ್ಯುತ್ ಸಿಗುತ್ತಿದ್ದು, ಇದರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳ ಮನೆಗಳೂ ಸೇರಿಕೊಂಡಿವೆ. ಹಾಗಾಗಿ ಇಂತಹ ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ಡೇಟಾ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.
ಸಿಎಂ ಬದಲಾದರೂ ಗ್ಯಾರಂಟಿ ನಿಲ್ಲಲ್ಲ; ಡಿಬಿಕೆಶಿಗೂ ಬದ್ಧತೆ ಇದೆ ಐದು ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಪ್ರತಿ ವರ್ಷ ₹52 ಸಾವಿರ ಕೋಟಿ ಹಣ ವ್ಯಯಿಸುತ್ತಿದ್ದು, ಇದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದರು. “ಡಿ.ಕೆ. ಶಿವಕುಮಾರ್ ಈಗ ಮುಖ್ಯಮಂತ್ರಿಯಾಗಿದ್ದಾರೆ. ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಸಂಪೂರ್ಣ ಬದ್ಧತೆ ಅವರಿಗಿದೆ. ಇದು ಯಾರದ್ದೋ ವೈಯಕ್ತಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಅಧಿಕೃತ ಯೋಜನೆ. ಹಾಗಾಗಿ ಮುಂದೆ ಯಾರೇ ಸಿಎಂ ಆದರೂ ಗ್ಯಾರಂಟಿಗಳು ನಿಲ್ಲುವುದಿಲ್ಲ” ಎಂದು ಭರವಸೆ ನೀಡಿದರು.
ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಕಿಡಿಕಾರಿದ ಅವರು, ವಿರೋಧ ಪಕ್ಷದ ನಾಯಕರು ವಿಷಯಗಳನ್ನು ಸರಿಯಾಗಿ ಅಧ್ಯಯನ ಮಾಡದೆ ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ಮಹತ್ವದ ರಾಜಕೀಯ ಮುನ್ಸೂಚನೆ ನೀಡಿದ ರಾಯರೆಡ್ಡಿ, ಇನ್ನು ಒಂದು ವಾರದ ಅವಧಿಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಿದ್ದರಾಮಯ್ಯ ಅವರ ಮಾರ್ಗದರ್ಶನ ಹಾಗೂ ಸಿಎಂ ನೇತೃತ್ವದಲ್ಲಿ ಸರ್ಕಾರ ಮತ್ತಷ್ಟು ಚುರುಕಾಗಿ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ಜೊತೆ ‘ಚಪ್ಪಲಿ ಭಾಗ್ಯ’
