TOP NEWS

MJ Mahesh: ರಾಜ್ಯ ಬಿಜೆಪಿಯಲ್ಲಿ ಶಿಸ್ತು ಕ್ರಮದ ಚಾಟಿ: ವಕ್ತಾರ ಎಂ.ಜಿ. ಮಹೇಶ್ 6 ವರ್ಷ ಪಕ್ಷದಿಂದ ಉಚ್ಚಾಟನೆ!

BJP spokes person mj Mahesh expelled for 6 years from party

ಮೈಸೂರು: ಪಕ್ಷದ ನಿಯಮಗಳನ್ನು ಗಾಳಿಗೆ ತೂರಿ ಹಿರಿಯ ಮುಖಂಡರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ (MJ Mahesh) ಅವರಿಗೆ ಕಮಲ ಪಾಳಯ ಬಿಗ್ ಶಾಕ್ ನೀಡಿದೆ. ಶಿಸ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಮೈಸೂರು ಮೂಲದ ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಮುಂದಿನ 6 ವರ್ಷಗಳ ಕಾಲ ಹೊರಹಾಕಲಾಗಿದೆ.

ಶೋಕಾಸ್‌ ನೋಟೀಸ್‌ ನೀಡಿದ್ದ ಬಿಜೆಪಿ

ಜೂನ್ 19 ರಂದು ಆಯೋಜಿಸಲಾಗಿದ್ದ ಪಕ್ಷದ ಪ್ರಮುಖರ ಮೀಟಿಂಗ್‌ನಲ್ಲಿ ಎಂ.ಜಿ. ಮಹೇಶ್ ಅವರು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾಗಿದೆ. ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಶಿಸ್ತು ಸಮಿತಿಯು ಅವರಿಗೆ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೇಳಿತ್ತು.

ಆದರೆ, ಈ ನೋಟಿಸ್‌ಗೆ ಮಹೇಶ್ ಅವರು ಕೊಟ್ಟ ಪ್ರತಿಕ್ರಿಯೆ ಸಮರ್ಪಕವಾಗಿಲ್ಲದ ಕಾರಣ ಶಿಸ್ತು ಸಮಿತಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ತಕ್ಷಣದಿಂದಲೇ ಅನ್ವಯವಾಗುವಂತೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಕಿತ್ತುಹಾಕಿ, 6 ವರ್ಷ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿಯ ಮುಖ್ಯಸ್ಥ ಲಿಂಗರಾಜು ಪಾಟೀಲ್ ತಿಳಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದಲೇ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ವಿಜಯೇಂದ್ರ ಪದಚ್ಯುತಿಗೆ ದಿಲ್ಲಿ ಮಟ್ಟದಲ್ಲಿ ಸ್ಕೆಚ್? ಮಾಜಿ ಸಿಎಂ ಆಡಿಯೋ ಲೀಕ್ ಬಿರುಗಾಳಿ!

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿಯೊಳಗಿನ (BJP) ಭಿನ್ನಮತ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಪ್ಲಾನ್ ನಡೆಯುತ್ತಿದೆ ಎಂಬ ಮುನ್ಸೂಚನೆ ನೀಡುವ ಸ್ಫೋಟಕ ಆಡಿಯೋವೊಂದು ರಾಜಕೀಯ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಆಡಿಯೋ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರದ್ದು ಎನ್ನಲಾಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದಗೌಡರು, ಆ ಆಡಿಯೋ ತಮಗೂ ಸಂಬಂಧವಿಲ್ಲ ಎಂದು ಜಾರಿಕೊಂಡಿದ್ದಾರೆ.

ಆಡಿಯೋದಲ್ಲೇನಿದೆ? ಒದ್ದು ಕಿತ್ತು ಬಿಸಾಕಿ ಎಂದಿದ್ದಾರಾ ನಾಯಕರು?

ವೈರಲ್ ಆಗಿರುವ ಆಡಿಯೋ ಸಂಭಾಷಣೆಯಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ದೆಹಲಿಯ ಪ್ರಭಾವಿ ನಾಯಕರೊಬ್ಬರ ಜೊತೆ ರಾಜ್ಯ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. “ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಇರಲಿ, ಅಲ್ಲಿಯವರೆಗೂ ಯಾವುದೇ ಆತುರದ ನಿರ್ಧಾರ ಬೇಡ. ಈಗಲೇ ಅವರ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಗೆ ‘ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿ ಬರುತ್ತದೆ. ಇದು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಬಹುದು. ಹಾಗಾಗಿ ಸೂಕ್ತ ಸಮಯ ಬಂದಾಗ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ,” ಎಂದು ಸದಾನಂದಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಆ ಕಡೆಯಿಂದ ಮಾತನಾಡಿದ ಕೇಂದ್ರ ನಾಯಕರು, ರಾಜ್ಯದಲ್ಲಿ ನಮಗೆ ಬೆಂಬಲ ನೀಡಲು ಬಿ.ಎಲ್. ಸಂತೋಷ್ ಮತ್ತು ಪ್ರಲ್ಹಾದ್ ಜೋಶಿ ಇದ್ದಾರೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ನನ್ನದಲ್ಲದ ಆಡಿಯೋಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ?: ಡಿವಿಎಸ್ ಪ್ರಶ್ನೆ

ಈ ಆಡಿಯೋ ವಿವಾದದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ತೀಕ್ಷ್ಣವಾಗಿ ಉತ್ತರಿಸಿದ ಡಿ.ವಿ. ಸದಾನಂದಗೌಡರು, “ಅದು ನನ್ನ ಧ್ವನಿಯೇ ಅಲ್ಲ. ನನ್ನದಲ್ಲದ ಆಡಿಯೋ ಅಥವಾ ವಿಡಿಯೋ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ, ಆ ಬಗ್ಗೆ ಯಾವುದೇ ಕಮೆಂಟ್ ಮಾಡುವುದೂ ಇಲ್ಲ. ಸುಮ್ಮನೆ ಯಾವುದೋ ಆಡಿಯೋ ಹರಿದಾಡಿದ ತಕ್ಷಣ ಅದು ನನ್ನದೇ ಎಂದು ಬಿಂಬಿಸುವುದು ಸರಿಯಲ್ಲ. ನನ್ನ ವಿರುದ್ಧ ಇಂತಹ ಹತ್ತಾರು ಪಿತೂರಿಗಳು ಬಹಳ ದಿನಗಳಿಂದ ನಡೆಯುತ್ತಲೇ ಇವೆ. ಈ ಆಡಿಯೋದ ಅಸಲಿಯತ್ತನ್ನು ನೀವೇ (ಮಾಧ್ಯಮಗಳೇ) ಪತ್ತೆ ಹಚ್ಚಿ,” ಎಂದು ಸವಾಲು ಹಾಕಿದ್ದಾರೆ.

ಸತ್ಯ ಹೇಳಿದ್ದಕ್ಕೇ ನನ್ನ ವಿರುದ್ಧ ಈ ಸಂಚು!

ಪಕ್ಷದೊಳಗಿನ ಕೆಲ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ಹಿಂದೆ ಶಾಸಕರ ಕ್ರಾಸ್ ವೋಟಿಂಗ್ (ಅಡ್ಡಮತದಾನ) ನಡೆದಾಗ ನಮ್ಮ ಪಕ್ಷದವರೇ ಆದ ಕೆಲವು ಶಾಸಕರು ಕಾಂಗ್ರೆಸ್ ನಾಯಕರೊಂದಿಗೆ ಸೀಕ್ರೆಟ್ ಮೀಟಿಂಗ್ ಮಾಡಿದ್ದರು. ಆ ಕಹಿ ಸತ್ಯವನ್ನು ನಾನೇ ಬಹಿರಂಗಪಡಿಸಿದ್ದೆ. ಒಂದು ವೇಳೆ ನಾನು ಅಂದು ಧೈರ್ಯವಾಗಿ ಧ್ವನಿ ಎತ್ತದಿದ್ದರೆ ನಮ್ಮ ಪಕ್ಷಕ್ಕೆ ಆಗುತ್ತಿದ್ದ ದ್ರೋಹ ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ನಾನು ಸದಾ ಸತ್ಯವನ್ನೇ ನಂಬಿದವನು. ಈ ಆಡಿಯೋ ವಿಚಾರವಾಗಿ ನಾನು ಸಾರ್ವಜನಿಕವಾಗಿ ಯಾರೊಂದಿಗೂ ಚರ್ಚಿಸುವುದಿಲ್ಲ. ಒಂದು ವೇಳೆ ನಮ್ಮ ಹೈಕಮಾಂಡ್ ನಾಯಕರು ವಿವರಣೆ ಕೇಳಿದರೆ ಅವರಿಗೆ ಮಾತ್ರವೇ ನೇರವಾಗಿ ಉತ್ತರಿಸುತ್ತೇನೆ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳದ ಮುನ್ಸೂಚನೆ

Leave a Reply

Your email address will not be published. Required fields are marked *