ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಇಲಾಖೆಯ ಉನ್ನತ ಮಟ್ಟದ ಸಭೆಗೆ ಹಾಜರಾಗಲು ಮೈಸೂರಿನಿಂದ ಬೆಂಗಳೂರಿನತ್ತ ಧಾವಿಸುತ್ತಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳಿದ್ದ ವಾಹನವು ಚನ್ನಪಟ್ಟಣದ ಮುದುಗೆರೆ ಸಮೀಪ ಭೀಕರ ಅಪಘಾತಕ್ಕೆ (Road Mishap) ಈಡಾಗಿದೆ. ಚಲಿಸುತ್ತಿದ್ದ ಕಾರಿನ ಟೈರ್ ಹಠಾತ್ತನೆ ಸಿಡಿದಿದ್ದರಿಂದ ಈ ಅಪಘಾತ ಸಂಭವಿಸಿದ್ದು, ವಾಹನ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಆನಂದ್ ಎಂಬುವವರೇ ಮೃತಪಟ್ಟ ದುರ್ದೈವಿ ಚಾಲಕ. ಕಾರಿನಲ್ಲಿದ್ದ ಮೈಸೂರು ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಪ್ರಕಾಶ್, ರಾಜು, ಕೃಷ್ಣ ಹಾಗೂ ಮಹೇಶ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಚಾಲಕನ ಹತೋಟಿ ತಪ್ಪಿದ ಕಾರು ಹೆದ್ದಾರಿಯಲ್ಲೇ ಡಿವೈಡರ್ ಹಾರಿ ರಸ್ತೆಯ ಇನ್ನೊಂದು ಬದಿಗೆ (ವಿರುದ್ಧ ದಿಕ್ಕಿನ ರಸ್ತೆಗೆ) ನುಗ್ಗಿದೆ. ಅದೇ ವೇಳೆ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.. ಅಪಘಾತದ ಸದ್ದಿಗೆ ಓಡಿಬಂದ ಸ್ಥಳೀಯರು ಮತ್ತು ಸಹಪ್ರಯಾಣಿಕರು ತಕ್ಷಣವೇ ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಚನ್ನಪಟ್ಟಣ ಹಾಗೂ ಮಂಡ್ಯದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.
ಸರಕಾರಿ ಸಭೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದ ಅಧಿಕಾರಿಗಳಿಗೆ ಮುದುಗೆರೆ ಗ್ರಾಮದ ಹತ್ತಿರ ವಿಧಿ ಕಂಟಕವಾಗಿದೆ. ಕಾರು ಪಲ್ಟಿಯಾದ ದೃಶ್ಯ ಕಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರೆ ಸವಾರರು ಕೆಲಕಾಲ ದಿಕ್ಕೆಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚನ್ನಪಟ್ಟಣ ಟ್ರಾಫಿಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊರಟಗೆರೆ: ನಿಯಂತ್ರಣ ತಪ್ಪಿ ಶಾಲೆಯ ಗೋಡೆಗೆ ಡಿಕ್ಕಿ ಹೊಡೆದ ಕ್ಯಾಂಟರ್; ತಪ್ಪಿದ ಭಾರಿ ದುರಂತ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಭೈರೇನಹಳ್ಳಿ ಕ್ರಾಸ್ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತವೊಂದು ಜರುಗಿದೆ. ಗೌರಿಬಿದನೂರು ಮಾರ್ಗದಿಂದ ಮಧುಗಿರಿಯತ್ತ ಸಾಗುತ್ತಿದ್ದ ಕ್ಯಾಂಟರ್ ವಾಹನವೊಂದು ಚಾಲಕನ ಹತೋಟಿ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಶಾಲೆಯ ಕಾಂಪೌಂಡ್‌ಗೆ ನುಗ್ಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಅಪಘಾತವು ಮಧ್ಯರಾತ್ರಿಯ ಅವಧಿಯಲ್ಲಿ ಸಂಭವಿಸಿರುವುದರಿಂದ ಶಾಲಾ ಮೈದಾನದಲ್ಲಿ ಮಕ್ಕಳು ಅಥವಾ ಸಾರ್ವಜನಿಕರು ಯಾರೂ ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ಒಂದು ದೊಡ್ಡ ಮಟ್ಟದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಭೈರೇನಹಳ್ಳಿ ಕ್ರಾಸ್ ನಿರಂತರ ಅಪಘಾತಗಳ ವಲಯವಾಗಿ ಮಾರ್ಪಡುತ್ತಿರುವುದು ಸುತ್ತಮುತ್ತಲಿನ ಹಳ್ಳಿಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೇವಲ ಎರಡು ವಾರಗಳ ಹಿಂದಷ್ಟೇ ಇದೇ ತಿರುವಿನಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಇದೀಗ ಮತ್ತೆ ಅದೇ ಜಾಗದಲ್ಲಿ ಮತ್ತೊಂದು ದುರಂತ ಸಂಭವಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಇಲ್ಲಿ ಕೈಗೊಂಡಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರ್ಯವೇ ಈ ಸರಣಿ ಅಪಘಾತಗಳಿಗೆ ನೇರ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆಯ ತಿರುವುಗಳು ಸರಿಯಾಗಿಲ್ಲದ ಕಾರಣ ಮತ್ತು ವಾಹನ ಸವಾರರಿಗೆ ಮುನ್ಸೂಚನೆ ನೀಡುವ ಬೋರ್ಡ್‌ಗಳು ಇಲ್ಲದಿರುವುದರಿಂದ ಚಾಲಕರಿಗೆ ರಸ್ತೆಯ ಅಂದಾಜು ಸಿಗುತ್ತಿಲ್ಲ. ಅಧಿಕಾರಿಗಳ ಇಂತಹ ನಿರ್ಲಕ್ಷ್ಯದಿಂದಾಗಿ ಭೈರೇನಹಳ್ಳಿ ಕ್ರಾಸ್ ಸದ್ಯ ಸಾವಿನ ತಾಣವಾಗಿ ಬದಲಾಗುತ್ತಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಶೇಖರಿಸಿದ್ದ ನಾಡಬಾಂಬ್ ಸ್ಫೋಟ; 8 ಮನೆಗಳಿಗೆ ಹಾನಿ, ತಲೆಮರೆಸಿಕೊಂಡ ಮಾಲೀಕ
