ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾಗೂ ಇಟಲಿ ಪ್ರಧಾನಿ ಜೋರ್ಜಿಯಾ ಮೆಲೋನಿ ನಡುವಿನ ಫೋಟೋ ವಿವಾದ ಮತ್ತು ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ. “ಇಟಲಿ ಪ್ರಧಾನಿ ಮೆಲೋನಿ ನನ್ನೊಂದಿಗೆ ಫೋಟೋಗಾಗಿ ಭಿಕ್ಷೆ ಬೇಡಿದ್ದರು” ಎಂಬ ಟ್ರಂಪ್ ಅವರ ಹೇಳಿಕೆಗೆ ಮೆಲೋನಿ ಜಾಗತಿಕ ಮಟ್ಟದಲ್ಲೇ ಅತ್ಯಂತ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ. ಇದನ್ನು ಕೇಳಿ ನನಗೆ ತೀವ್ರ ಆಘಾತವಾಗಿದೆ. ನಾನು ಅಥವಾ ಇಟಲಿ ದೇಶ ಎಂದಿಗೂ ಯಾರ ಮುಂದೂ ಭಿಕ್ಷೆ ಬೇಡುವುದಿಲ್ಲ” ಎಂದು ಮೆಲೋನಿ ಖಾರವಾಗಿ ಎಚ್ಚರಿಸಿದ್ದಾರೆ.
ಟ್ರಂಪ್ಗೆ ಟಾಂಗ್ ಕೊಟ್ಟ ಮೆಲೋನಿ
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿರುವ ಜೋರ್ಜಿಯಾ ಮೆಲೋನಿ, ಅಮೆರಿಕದ ಅಧ್ಯಕ್ಷರು ತಮ್ಮದೇ ಆದ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಇಷ್ಟು ಕೀಳಾಗಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂದು ನೆನಪಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಹಾಗೂ ಅಮೆರಿಕದ ನಿಜವಾದ ಶತ್ರುಗಳ ಮುಂದೆ ಮಣಿಯುವ ಟ್ರಂಪ್, ಮಿತ್ರ ದೇಶಗಳ ಎದುರು ಮಾತ್ರ ಇಂತಹ ವಾಗ್ದಾಳಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕುಟುಕಿದ್ದಾರೆ. ಇತ್ತೀಚೆಗೆ ನಡೆದ ಜಿ7 ಶೃಂಗಸಭೆಯಲ್ಲಿ ಮೆಲೋನಿ ಅವರು ಫೋಟೋಗಾಗಿ ಹಪಹಪಿಸುತ್ತಿದ್ದರು, ಅವರ ಮೇಲೆ ಮರುಕ ಪಟ್ಟು ನಾನು ಫೋಟೋಗೆ ನಿಂತುಕೊಂಡೆ ಎಂದು ಟ್ರಂಪ್ ಇಟಲಿಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೇವಡಿ ಮಾಡಿದ್ದರು. ಇದೇ ಕಾರಣಕ್ಕೆ ಮೆಲೋನಿ ಈಗ ಅಮೆರಿಕ ಅಧ್ಯಕ್ಷರ ವಿರುದ್ಧ ನೇರ ಸಮರ ಸಾರಿದ್ದಾರೆ.
Io e l’Italia non imploriamo mai. pic.twitter.com/sTpKlqWB67
— Giorgia Meloni (@GiorgiaMeloni) June 19, 2026
ಮೆಲೋನಿ ವಿರುದ್ಧ ಟ್ರಂಪ್ ಆರೋಪ
ಮತ್ತೊಂದೆಡೆ, ಮೆಲೋನಿ ಅವರ ಈ ಆಕ್ರೋಶಕ್ಕೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ. ಇಟಲಿಯಲ್ಲಿ ಮೆಲೋನಿ ಅವರ ಜನಪ್ರಿಯತೆ ತಳ ಹಿಡಿದಿರುವುದರಿಂದಲೇ ಅವರು ನನ್ನ ವಿರುದ್ಧ ಇಂತಹ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕವನ್ನು ಬೆಂಬಲಿಸದೆ ಇರಾನ್ ಪರ ನಿಂತಿದ್ದೇ ಇಟಲಿ ಪ್ರಧಾನಿಯ ಇಂದಿನ ದುಸ್ಥಿತಿಗೆ ಕಾರಣ.
ಅಮೆರಿಕವು ಇಟಲಿಯ ರಕ್ಷಣೆಗಾಗಿ ವರ್ಷಕ್ಕೆ ಶತಕೋಟಿ ಡಾಲರ್ ಹಣವನ್ನು ವ್ಯಯಿಸುತ್ತದೆ, ಆದರೂ ಇರಾನ್ ಯುದ್ಧದ ಸಮಯದಲ್ಲಿ ಅಮೆರಿಕದ ವಿಮಾನಗಳು ಇಳಿಯಲು ಇಟಲಿ ತನ್ನ ರನ್ವೇಗಳನ್ನು ಬಳಸಲು ಬಿಡದೆ ದ್ರೋಹ ಬಗೆದಿತ್ತು ಎಂದು ಟ್ರಂಪ್ ಕಿಡಿಕಾರಿದ್ದಾರೆ. ಈಗ ಅಮೆರಿಕ ಗೆದ್ದ ಮೇಲೆ ತನ್ನ ರೇಟಿಂಗ್ಸ್ ಹೆಚ್ಚಿಸಿಕೊಳ್ಳಲು ಮೆಲೋನಿ ಸ್ನೇಹಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ಜಾಗತಿಕ ಮಟ್ಟದ ಈ ಇಬ್ಬರು ಪ್ರಭಾವಿ ನಾಯಕರ ವೈಯಕ್ತಿಕ ಇಗೋ ಜಗಳವು ಈಗ ಉಭಯ ದೇಶಗಳ ಮುತ್ಸದ್ದಿತನ ಹಾಗೂ ಅಂತರರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟಕ್ಕೆ ದೊಡ್ಡ ಕಲೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ: ನೀಟ್ ಮರುಪರೀಕ್ಷೆಗೆ ಮುನ್ನವೇ ಘೋರ ದುರಂತ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
