ಉಡುಪಿ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾಲಿವುಡ್‌ನ ‘ದಳಪತಿ’ ಜೋಸೆಫ್ ವಿಜಯ್ (CM Vijay) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಅವರು ಯಾವುದೇ ರಾಜಕೀಯ ಕಾರ್ಯಕ್ರಮಗಳಿಲ್ಲದೆ ಕೇವಲ ಶಕ್ತಿ ಆರಾಧನೆಗಾಗಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ದೇವಿಯ ದರ್ಶನ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಕುತೂಹಲ ಮೂಡಿಸಿದ ಭೇಟಿ
ಕಳೆದ ಮೇ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಆಡಳಿತಾತ್ಮಕ ಕೆಲಸಗಳಲ್ಲಿ ತೀವ್ರ ಬ್ಯುಸಿಯಾಗಿದ್ದ ವಿಜಯ್ ಅವರು ಅಧಿಕಾರ ಹಿಡಿದ ಕೇವಲ ಒಂದು ತಿಂಗಳಲ್ಲೇ ಮೂಕಾಂಬಿಕೆಯ ಸನ್ನಿಧಿಗೆ ಓಡೋಡಿ ಬಂದಿದ್ದಾರೆ. ತಮ್ಮ ಪ್ರವಾಸದ ವೇಳಾಪಟ್ಟಿಯ ಪ್ರಕಾರ ಅವರು ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಬೈಂದೂರು ತಾಲೂಕಿನ ಕೊಲ್ಲೂರು ಕ್ಷೇತ್ರವನ್ನು ತಲುಪಿದರು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಮುಗಿಸಿದ ತಕ್ಷಣವೇ ಅವರು ಯಾವುದೇ ಸಾರ್ವಜನಿಕ ಸಭೆ ನಡೆಸದೆ ಮಂಗಳೂರು ಮಾರ್ಗವಾಗಿ ಮರಳಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ತಮಿಳುನಾಡು ರಾಜಕೀಯಕ್ಕೂ ಕೊಲ್ಲೂರಿಗೂ ಇದೆ ನಂಟು
ಸಿಎಂ ವಿಜಯ್ ಅವರ ಈ ಧಾರ್ಮಿಕ ನಡೆಗೆ ತಮಿಳುನಾಡು ರಾಜಕಾರಣದಲ್ಲೂ ಭಾರಿ ಮಹತ್ವ ಸಿಕ್ಕಿದೆ. ಏಕೆಂದರೆ ತಮಿಳುನಾಡನ್ನು ಆಳಿದ ದಂತಕಥೆಗಳಿಗೂ ಮತ್ತು ಕೊಲ್ಲೂರು ಕ್ಷೇತ್ರಕ್ಕೂ ದಶಕಗಳ ಕಾಲದ ಅವಿನಾಭಾವ ಸಂಬಂಧವಿದೆ. ಮಾಜಿ ಸಿಎಂ ಎಂ. ಜಿ. ರಾಮಚಂದ್ರನ್ (MGR) ಅವರು ಮೂಕಾಂಬಿಕೆಯ ಪರಮ ಭಕ್ತರಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ದೇವಿಗೆ ಒಂದು ಕೆಜಿ ತೂಕದ ಭವ್ಯ ‘ಚಿನ್ನದ ಖಡ್ಗ’ವನ್ನು ಕಾಣಿಕೆಯಾಗಿ ನೀಡಿದ್ದರು. ಅವರ ಹಾದಿಯಲ್ಲೇ ನಡೆದಿದ್ದ ಜಯಲಲಿತಾ ಅವರು ಕೂಡ ತಮ್ಮ ರಾಜಕೀಯ ಸಂಕಷ್ಟದ ದಿನಗಳಲ್ಲಿ ಕೊಲ್ಲೂರಿಗೆ ಬಂದು ಮಹಾ ‘ಚಂಡಿಕಾ ಹೋಮ’ ನೆರವೇರಿಸಿದ್ದರಲ್ಲದೆ ದೇವಸ್ಥಾನಕ್ಕೆ ದೊಡ್ಡ ಮಟ್ಟದ ದೇಣಿಗೆ ಹಾಗೂ ತುಪ್ಪವನ್ನು ಅರ್ಪಿಸಿದ್ದರು. ತಮಿಳುನಾಡಿನಿಂದ ಕೊಲ್ಲೂರಿಗೆ ನೇರ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಿದ್ದೂ ಕೂಡ ಜಯಲಲಿತಾ ಅವರೇ ಆಗಿದ್ದಾರೆ. ಇದೀಗ ದ್ರಾವಿಡ ನಾಡಿನ ಹೊಸ ಹವಾ ಸೃಷ್ಟಿಸಿರುವ ಸಿಎಂ ಜೋಸೆಫ್ ವಿಜಯ್ ಅವರು ಕೂಡ ಅದೇ ಹಳೆಯ ತಮಿಳು ನಾಯಕರ ಪರಂಪರೆಯನ್ನು ಮುಂದುವರಿಸಿ ದೇವಿಯ ಶರಣಾಗಿರುವುದು ಭಕ್ತರಲ್ಲಿ ಕೌತುಕ ಮೂಡಿಸಿದೆ.
