ಬೆಂಗಳೂರು: ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ (MBBS), ದಂತ ವೈದ್ಯಕೀಯ (BDS) ಮತ್ತು ಸ್ನಾತಕೋತ್ತರ (PG) ಕೋರ್ಸ್ಗಳ ದಾಖಲಾತಿ ಫೀಸ್ ಹೆಚ್ಚಳ ಮಾಡದಿರಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಹೆಚ್ಚುವರಿ ಶುಲ್ಕ ಭರಿಸುವ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.
ಖಾಸಗಿ ಒಕ್ಕೂಟಗಳ ಬೇಡಿಕೆಗೆ ಮಣಿಯದ ಸರ್ಕಾರ
ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಉನ್ನತ ಮಟ್ಟದ ಸಭೆ ಜರುಗಿತು. ಈ ಸಭೆಯಲ್ಲಿ ಖಾಸಗಿ ಕಾಲೇಜುಗಳ ಪ್ರತಿನಿಧಿಗಳು ಶುಲ್ಕ ಹೆಚ್ಚಿಸುವಂತೆ ಮಂಡಿಸಿದ್ದ ಪ್ರಸ್ತಾವನೆಯನ್ನು ಸಚಿವರು ಕಡಾಖಂಡಿತವಾಗಿ ನಿರಾಕರಿಸಿದರು. ಕಳೆದ ವರ್ಷ (2025-26) ನಿಗದಿಯಾಗಿದ್ದ ಹಳೆಯ ಶುಲ್ಕದ ದರಗಳನ್ನೇ ಈ ಬಾರಿಯೂ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
‘ನೀಟ್’ ಗೊಂದಲದ ನಡುವೆ ಆರ್ಥಿಕ ಹೊರೆ ಬೇಡ
ಪ್ರಸ್ತುತ ದೇಶಾದ್ಯಂತ ‘ನೀಟ್’ ಪ್ರವೇಶ ಪರೀಕ್ಷೆಯ ವಿವಾದ ಹಾಗೂ ಮರುಪರೀಕ್ಷೆಯ ಆತಂಕ ಎದುರಾಗಿರುವುದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕಂಗಾಲಾಗಿದ್ದಾರೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಅವರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕುವುದು ಸೂಕ್ತವಲ್ಲ ಎಂಬ ಮಾನವೀಯ ನೆಲಗಟ್ಟಿನಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಈ ಶುಲ್ಕ ಸ್ಥಿರತೆಯು ಸರ್ಕಾರಿ ಸೀಟು ಹಾಗೂ ಖಾಸಗಿ ಕಾಲೇಜುಗಳ ಕೋಟಾ ಎರಡಕ್ಕೂ ಅನ್ವಯಿಸಲಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಸಚಿವರು ತಿಳಿಸಿದ್ದಾರೆ.
ಈ ಪ್ರಮುಖ ಸಭೆಯಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮದ್ ಮೋಸಿನ್ ಹಾಗೂ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಜಯರಾಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶುಲ್ಕ ವಿವರ :
ಎಂಬಿಬಿಎಸ್ :
ಸರ್ಕಾರಿ ಕಾಲೇಜು – 55,000 ರೂ.
ಕೆಪಿಸಿಎಫ್ ಸರ್ಕಾರಿ ಕೋಟ – 1,41,621 ರೂ.
ಕೆಆರ್ಎಲ್ಎಂಪಿಸಿಎ ಸರ್ಕಾರಿ ಕೋಟ – 1,41,621 ರೂ.
ಎಎಂಪಿಸಿಕೆ ಸರ್ಕಾರಿ ಕೋಟ – 1,41,621 ರೂ.
ಖಾಸಗಿ ವಿಶ್ವವಿದ್ಯಾನಿಲಯಗಳ ಸರ್ಕಾರಿ ಕೋಟ – 1,41,621 ರೂ.
ಕೆಪಿಸಿಎಫ್ ಖಾಸಗಿ ಕೋಟ – 11,88,167 ರೂ.
ಕೆಆರ್ಎಲ್ಎಂಪಿಸಿಎ ಖಾಸಗಿ ಕೋಟ – 11,88,167 ರೂ.
ಎಎಂಪಿಸಿಕೆ ಖಾಸಗಿ ಕೋಟ – 11,88,167 ರೂ.
ದಂತ ವೈದ್ಯಕೀಯ :
ಸರ್ಕಾರಿ ಕಾಲೇಜುಗಳ ಕೋಟ – 40,000 ರೂ.
ಕೆಪಿಸಿಎಫ್ ಸರ್ಕಾರಿ ಕೋಟ – 83,358 ರೂ.
ಕೆಆರ್ಎಲ್ಎಂಪಿಸಿಎ ಸರ್ಕಾರಿ ಕೋಟ – 83,358 ರೂ.
ಎಎಂಪಿಸಿಕೆ ಸರ್ಕಾರಿ ಕೋಟ – 83,358 ರೂ.
ಖಾಸಗಿ ಕೋಟ :
ಕೆಪಿಸಿಎಫ್ ಖಾಸಗಿ ಕೋಟ – 7,32,625 ರೂ.
ಕೆಆರ್ಎಲ್ಎಂಪಿಸಿಎ ಖಾಸಗಿ ಕೋಟ – 7,32,625 ರೂ.
ಎಎಂಪಿಸಿಕೆ ಖಾಸಗಿ ಕೋಟ – 7,32,625 ರೂ.
ಇದನ್ನೂ ಓದಿ: ಕಲಬುರಗಿ ಗರ್ಲ್ಸ್ ಹಾಸ್ಟೆಲ್ನಲ್ಲಿ ಮಧ್ಯರಾತ್ರಿ ಮದ್ಯದ ಪಾರ್ಟಿ: ಹುಡುಗರ ಅಕ್ರಮ ಪ್ರವೇಶ
