TOP NEWS

Bitcoin Scam: ಬಾಲ್ಯದ ಸ್ನೇಹ ತಂದಿಟ್ಟ ಬಿಟ್‌ಕಾಯಿನ್ ಗಂಡಾಂತರ: ನಲಪಾಡ್ ವಿರುದ್ಧ ಎಸ್‌ಐಟಿ ದೋಷಾರೋಪ ಪಟ್ಟಿ

Bitcoin scam Mohammed Nalapad name in SIT chargesheet

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಹುಕೋಟಿ ಬಿಟ್‌ಕಾಯಿನ್ (Bitcoin Scam) ಹಗರಣದಲ್ಲಿ ಕಾಂಗ್ರೆಸ್‌ನ ಪ್ರಮುಖ ಯುವ ನಾಯಕ ಮೊಹಮ್ಮದ್ ನಲಪಾಡ್ ಅವರ ಸುತ್ತ ಕಾನೂನಿನ ಬೇಲಿ ಮತ್ತಷ್ಟು ಬಿಗಿಗೊಂಡಿದೆ. ತುಮಕೂರಿನ ಖಾಸಗಿ ಟ್ರೇಡಿಂಗ್ ಕಂಪನಿಯಿಂದ ಡಿಜಿಟಲ್ ಕರೆನ್ಸಿ ಕಳವು ಮಾಡಿದ ಪ್ರಕರಣದ ತನಿಖೆ ಮುಗಿಸಿರುವ ವಿಶೇಷ ತನಿಖಾ ದಳ (SIT), ನ್ಯಾಯಾಲಯಕ್ಕೆ ಅಧಿಕೃತ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದೋಷಾರೋಪ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಆಪ್ತ ರಾಬಿನ್ ಖಂಡೇವಾಲಾ ಜೊತೆಗೆ ಮೊಹಮ್ಮದ್ ನಲಪಾಡ್ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಲಾಗಿದೆ.

ಶ್ರೀಕಿಗೆ ಸಹಾಯ ಮಾಡಿದ್ದ ನಲಪಾಡ್‌

ಎಸ್‌ಐಟಿ ನಡೆಸಿರುವ ತನಿಖೆಯ ಪ್ರಕಾರ, ಮುಂಬೈನ ಹವಾಲಾ ನೆಟ್‌ವರ್ಕ್ ಬಳಸಿ ಹ್ಯಾಕರ್ ಶ್ರೀಕಿ ದೋಚಿದ್ದ ಬಿಟ್‌ಕಾಯಿನ್‌ಗಳನ್ನು ನಗದು ಹಣವಾಗಿ ಪರಿವರ್ತಿಸಲು ನಲಪಾಡ್ ತಮ್ಮ ಪ್ರಭಾವ ಮತ್ತು ಸಂಪರ್ಕಗಳನ್ನು ಬಳಸಿಕೊಟ್ಟಿದ್ದರು. ಈ ಅಕ್ರಮ ನಗದೀಕರಣದ ಡೀಲ್‌ಗಾಗಿ ನಲಪಾಡ್ ಅವರಿಗೆ ಶ್ರೀಕಿ ಗ್ಯಾಂಗ್‌ನಿಂದ ಕೋಟ್ಯಂತರ ರೂಪಾಯಿ ಕಮಿಷನ್ ಹಾಗೂ ದೊಡ್ಡ ಮೊತ್ತದ ಪಾಲನ್ನು ನೀಡಲಾಗಿತ್ತು. ಅಷ್ಟೇ ಅಲ್ಲದೆ, ಈ ಹಗರಣದ ಕಪ್ಪುಹಣದ ಮೂಲಕ ನಲಪಾಡ್ ಅವರ ಆಪ್ತ ಹಾಗೂ ರಾಜ್ಯದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಮಗ ಐಷಾರಾಮಿ ಕಾರನ್ನು ಖರೀದಿಸಿದ್ದ ಎನ್ನುವ ಗಂಭೀರ ವಿಷಯವೂ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದ್ದು, ಆತನನ್ನೂ ಸಹ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. 2017ರಲ್ಲಿ ತುಮಕೂರಿನ ಹೊಸ ಬಡಾವಣೆ ಠಾಣೆಯಲ್ಲಿ ದಾಖಲಾಗಿದ್ದ ಈ ಕೇಸ್‌ನಲ್ಲಿ ಶ್ರೀಕಿ ಆ್ಯಂಡ್ ಟೀಮ್ ಬರೋಬ್ಬರಿ 60 ಬಿಟ್‌ಕಾಯಿನ್‌ಗಳನ್ನು ಹ್ಯಾಕ್ ಮಾಡಿತ್ತು.

ಈ ಇಡೀ ಹಗರಣದ ಬೇರುಗಳು ನಲಪಾಡ್ ಅವರಿಗೆ ತಗುಲಲು ಅವರ ಬಾಲ್ಯದ ಗೆಳೆತನವೇ ಕಾರಣ ಎನ್ನಲಾಗಿದೆ. ನಲಪಾಡ್ ಅವರ ಸಹೋದರ ಉಮರ್ ನಲಪಾಡ್ ಹಾಗೂ ಹ್ಯಾಕರ್ ಶ್ರೀಕಿ ಇಬ್ಬರೂ ಪ್ರೌಢಶಾಲಾ ದಿನಗಳ ಸಹಪಾಠಿಗಳಾಗಿದ್ದರು. ಸಹೋದರನ ಮೂಲಕವೇ ನಲಪಾಡ್‌ಗೆ ಶ್ರೀಕಿಯ ಪರಿಚಯವಾಗಿದ್ದು, ಇದೇ ಹಳೆಯ ಸ್ನೇಹದ ಆಧಾರದಲ್ಲಿ ಬಿಟ್‌ಕಾಯಿನ್ ದಂಧೆಗೆ ಸಾಥ್ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ, ಈ ಪ್ರಕರಣದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಸಹ ನಲಪಾಡ್‌ಗೆ 3ನೇ ಬಾರಿಗೆ ಅಂತಿಮ ಸಮನ್ಸ್ ಜಾರಿ ಮಾಡಿದೆ. ಇದಕ್ಕೂ ಮುನ್ನ ಜಾರಿಯಾಗಿದ್ದ ಎರಡು ಸಮನ್ಸ್‌ಗಳಿಗೆ ನಲಪಾಡ್ ಅವರು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಹಾಗೂ ರಾಜಕೀಯ ಕಾರ್ಯಕಲಾಪಗಳ ನೆಪವೊಡ್ಡಿ ಗೈರಾಗಿದ್ದರು. ಆದರೆ ಈಗ ಎಸ್‌ಐಟಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿರುವುದರಿಂದ ಇಡಿ ಮುಂದೆ ಹಾಜರಾಗುವುದು ನಲಪಾಡ್‌ಗೆ ಅನಿವಾರ್ಯವಾಗಿದೆ. ಒಂದು ವೇಳೆ ಈ ಬಾರಿಯೂ ಅವರು ವಿಚಾರಣೆಯಿಂದ ತಪ್ಪಿಸಿಕೊಂಡರೆ ಇಡಿ ಅಧಿಕಾರಿಗಳು ಬಂಧನದಂತಹ ಕಠಿಣ ಕ್ರಮಗಳಿಗೆ ಮುಂದಾಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಧಾರವಾಡ ಜಿಲ್ಲೆಯ 24 ಗ್ರಾಮ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ಹಠಾತ್ ದಾಳಿ

Leave a Reply

Your email address will not be published. Required fields are marked *