ಬೆಂಗಳೂರು: “ಹಳೆಯ ಮುನಿಸು, ದ್ವೇಷ ಹಾಗೂ ಪ್ರತೀಕಾರದ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗಿಟ್ಟು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುವುದೇ ನಿಮ್ಮ ಮುಂದಿನ ಅಂತಿಮ ಗುರಿಯಾಗಿರಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮುಖಂಡರ ಭೇಟಿ ವೇಳೆ ಸಿಎಂ ಕಿವಿಮಾತು
ಮೈಸೂರು ಜಿಲ್ಲೆಯ ಹಿರಿಯ ನಾಯಕ, ಮಾಜಿ ಶಾಸಕ ಮಂಜುನಾಥ್ ಹಾಗೂ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಮೈಸೂರು ಭಾಗದ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕುಮಾರಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಎಂ, ಭವಿಷ್ಯದ ರಾಜಕೀಯ ತಂತ್ರಗಾರಿಕೆಯ ಪಾಠ ಮಾಡಿದರು. ಸ್ಥಳೀಯವಾಗಿ ತಪ್ಪು ಮಾಹಿತಿ ಅಥವಾ ಭಿನ್ನಾಭಿಪ್ರಾಯಗಳಿಂದಾಗಿ ಹಿಂದೆ ಕೆಲವು ಯಡವಟ್ಟುಗಳು ಆಗಿರಬಹುದು. ಆದರೆ, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕುಳಿತುಕೊಳ್ಳಬೇಡಿ. ಸಣ್ಣಪುಟ್ಟ ವಿಚಾರಗಳನ್ನು ಮರೆತು ಪಕ್ಷದ ದೊಡ್ಡ ಗುರಿಯತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
ಈ ಸಿಎಂ ಕುರ್ಚಿ ನಿಮ್ಮ ಪರಿಶ್ರಮದ ಕೊಡುಗೆ: ಭಾವುಕರಾದ ಡಿ.ಕೆ. ಶಿವಕುಮಾರ್
ಕಾರ್ಯಕರ್ತರ ನಿರಂತರ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿಎಂ, “ಇವತ್ತು ನಾನು ಅಲಂಕರಿಸಿರುವ ಈ ಮುಖ್ಯಮಂತ್ರಿ ಹುದ್ದೆ ಕೇವಲ ನನ್ನೊಬ್ಬನಿಗೆ ಸೀಮಿತವಾದುದಲ್ಲ. ಇದು ನಿಮ್ಮೆಲ್ಲರ ಹಾಗೂ ರಾಜ್ಯದ ಜನತೆಯ ಆಸ್ತಿ. ನೀವೆಲ್ಲರೂ ಬೆಂಬಲವಾಗಿ ನಿಲ್ಲದಿದ್ದರೆ ನಾನು ಈ ಉನ್ನತ ಸ್ಥಾನಕ್ಕೆ ಬರಲು ಸಾಧ್ಯವೇ ಇರಲಿಲ್ಲ. ಈ ಜವಾಬ್ದಾರಿಯುತ ಸ್ಥಾನ ಸಿಗಲು ನಿಮ್ಮ ಹಗಲಿರುಳಿನ ಪರಿಶ್ರಮ, ಪ್ರೀತಿ ಮತ್ತು ಹೋರಾಟವೇ ಕಾರಣ. ನಿಮ್ಮ ಈ ತ್ಯಾಗವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಭಾವುಕರಾಗಿ ನುಡಿದರು.
ಮೈಮರೆಯಬೇಡಿ, ಮತ ಬ್ಯಾಂಕ್ ಉಳಿಸಿಕೊಳ್ಳಿ: ಮುಂಬರುವ ಚುನಾವಣಾ ಸವಾಲುಗಳ ಕುರಿತು ಹುಣಸೂರು ಭಾಗದ ನಾಯಕರಿಗೆ ಎಚ್ಚರಿಕೆ ನೀಡಿದ ಸಿಎಂ, “ಅಧಿಕಾರ ಸಿಕ್ಕಿದೆ ಎಂದು ಯಾರೂ ವಿಶ್ರಮಿಸಬಾರದು. ವಿರೋಧ ಪಕ್ಷಗಳ ಯಾವುದೇ ಕುತಂತ್ರ ಅಥವಾ ಆಮಿಷಗಳಿಗೆ ನಮ್ಮ ಮತದಾರರು ಬಲಿಯಾಗದಂತೆ ನೋಡಿಕೊಳ್ಳಿ. ಪ್ರತಿಯೊಬ್ಬರೂ ಜಾಗರೂಕರಾಗಿದ್ದು, ಪಕ್ಷದ ಮತ ಬ್ಯಾಂಕ್ ಅನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಿ” ಎಂದು ರಾಜಕೀಯ ಚಾಣಾಕ್ಷತನದ ಮಂತ್ರ ಬೋಧಿಸಿದರು.
ಇದನ್ನೂ ಓದಿ: ಸಚಿವರಿಗೆ ರೂಮ್ ಅಲಾಟ್ಮೆಂಟ್: ಸಿಎಂ ಗೃಹ ಕಚೇರಿ ಬಾಗಿಲು ಉಲ್ಟಾ!
