ನವದೆಹಲಿ: ಕಳೆದ ವರ್ಷ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಐತಿಹಾಸಿಕ ‘ಸಿಂಧೂ ನದಿ (Indus River) ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತ್ತಿನಲ್ಲಿಟ್ಟಿದೆ. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಸರಣಿ ಅಪಪ್ರಚಾರ ಹಾಗೂ ಕಟು ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಆದರೆ, ನೆರೆರಾಷ್ಟ್ರದ ಈ ದುರುದ್ದೇಶಪೂರ್ವಕ ಅಪಪ್ರಚಾರದ ನಡುವೆಯೂ ಭಾರತವು ಮತ್ತೊಮ್ಮೆ ಭಾರಿ ಮಾನವೀಯತೆ ಮೆರೆದಿದೆ. ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯಿಂದ ಪಾಕಿಸ್ತಾನದ ಕಡೆಗೆ ಭಾರಿ ಪ್ರಮಾಣದ ಪ್ರವಾಹ ನುಗ್ಗುವ ಸಾಧ್ಯತೆ ಇರುವುದರ ಬಗ್ಗೆ ದೆಹಲಿ ಮುಂಚೂಣಿಯಲ್ಲೇ ಇಸ್ಲಾಮಾಬಾದ್ಗೆ ಅಧಿಕೃತ ಎಚ್ಚರಿಕೆ ರವಾನಿಸಿದೆ. ಕಳೆದ ವರ್ಷ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾದ ನಂತರ ಭಾರತವು ಪಾಕಿಸ್ತಾನಕ್ಕೆ ನೀಡಿರುವ ಎರಡನೇ ಪ್ರಮುಖ ಪ್ರವಾಹ ಮುನ್ನೆಚ್ಚರಿಕೆ ಇದಾಗಿದೆ.
ಭಾರತದಿಂದ ಅತ್ಯುತ್ತಮ ಕಾರ್ಯ
ಭಾರತದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಸಲಾಲ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ಸ್ಪೀಲ್ವೇ ಗೇಟ್ಗಳನ್ನು ಮುಂಗಾರು ಮುನ್ನ ಹೂಳು ತೆಗೆಯುವ ಉದ್ದೇಶಕ್ಕಾಗಿ ತೆರೆಯಲಾಗಿದೆ. ಇದರಿಂದಾಗಿ ಮೇ 30 ರವರೆಗೆ ಚೆನಾಬ್ ನದಿಯಲ್ಲಿ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, ನದಿಯ ಕೆಳಭಾಗದಲ್ಲಿರುವ ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾರತೀಯ ಅಧಿಕಾರಿಗಳಿಂದ ಈ ಆಪತ್ಕಾಲದ ಮುನ್ನೆಚ್ಚರಿಕೆ ಸಂದೇಶ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರವು ತನ್ನ ಪಂಜಾಬ್ ಪ್ರಾಂತ್ಯದಲ್ಲಿ ತಕ್ಷಣದಿಂದಲೇ ಪ್ರವಾಹದ ಹೈ ಅಲರ್ಟ್ ಘೋಷಿಸಿದೆ ಹಾಗೂ ಅಲ್ಲಿನ ವಿಪತ್ತು ನಿರ್ವಹಣಾ ಪಡೆಗಳನ್ನು ರಕ್ಷಣಾ ಕಾರ್ಯಕ್ಕೆ ಸಜ್ಜುಗೊಳಿಸಿದೆ. ಭಾರತವು ಗೇಟ್ಗಳನ್ನು ತೆರೆದಿರುವುದರಿಂದ ಚೆನಾಬ್ ನದಿಯ ನೀರಿನ ಮಟ್ಟ ದಿಢೀರನೆ ಎರಡರಿಂದ ಮೂರು ಮೀಟರ್ಗಳಷ್ಟು ಹೆಚ್ಚಾಗಲಿದ್ದು, ಸಿಯಾಲ್ಕೋಟ್ ಸೇರಿದಂತೆ ನದಿ ತೀರದ ಆಸುಪಾಸಿನಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 130 ಮೀಟರ್ ಎತ್ತರವಿರುವ ಈ ಸಲಾಲ್ ಅಣೆಕಟ್ಟು ಸಿಂಧೂ ಒಪ್ಪಂದದ ಅಡಿಯಲ್ಲಿ ಭಾರತ ನಿರ್ಮಿಸಿದ ಮೊದಲ ಯೋಜನೆಯಾಗಿದ್ದು, ಮಳೆಯ ದಿನಗಳಲ್ಲಿ ನೀರಿನ ಮಟ್ಟ ನಿರ್ವಹಣೆಗೆ ಭಾರತ ಇಂತಹ ಕ್ರಮ ಕೈಗೊಳ್ಳುತ್ತದೆ.
ವಿಶೇಷವೆಂದರೆ, ಭಾರತದ ಈ ಸೌಜನ್ಯದ ನಡುವೆಯೂ ಪಾಕಿಸ್ತಾನ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧದ ವಿಷಕಾರುವುದನ್ನು ನಿಲ್ಲಿಸಿಲ್ಲ. ಕೃಷಿ ಪ್ರಧಾನ ಆರ್ಥಿಕತೆಯಾಗಿರುವ ಪಾಕಿಸ್ತಾನಕ್ಕೆ ಪಂಜಾಬ್ ಪ್ರಾಂತ್ಯವು ದೇಶದ ‘ಅನ್ನದ ಬಟ್ಟಲು’ ಇದ್ದಂತೆ. ಹೀಗಾಗಿ ಸಿಂಧೂ ಬೇಸಿನ್ ನದಿಗಳ ನೀರು ಅವರಿಗೆ ಅತ್ಯಂತ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ತಜಕಿಸ್ತಾನದಲ್ಲಿ ನಡೆದ ಜಾಗತಿಕ ಜಲ ಸಮ್ಮೇಳನದಲ್ಲಿ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರು ಭಾರತದ ವಿರುದ್ಧ ರಾಜಕೀಯ ಮಾಡುತ್ತಿರುವ ಆರೋಪ ಹೊರಿಸಿದ್ದಾರೆ. ಅತ್ತ ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಿಂಧೂ ಒಪ್ಪಂದವನ್ನು ಮೂಲೆಗುಂಪು ಮಾಡಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಹಾಗೂ ನೀರನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು ಎಂದು ಜಾಗತಿಕ ನಾಯಕರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ, ಕಳೆದ ಎಂಟು ತಿಂಗಳಲ್ಲಿ ಭಾರತ ಇಂತಹ ಉದಾರತೆ ತೋರುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಕಳೆದ ಆಗಸ್ಟ್ನಲ್ಲಿ ಸತ್ಲೆಜ್ ನದಿಯ ಪ್ರವಾಹದ ಬಗ್ಗೆ ಭಾರತ ನೀಡಿದ್ದ ಮುನ್ನೆಚ್ಚರಿಕೆಯಿಂದಾಗಿ ಪಾಕಿಸ್ತಾನವು ಹತ್ತಾರು ಸಾವಿರ ಜನರನ್ನು ಸಕಾಲದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾಧ್ಯವಾಗಿತ್ತು. ಅಂದೂ ಕೂಡ ಪಾಕಿಸ್ತಾನ ಭಾರತಕ್ಕೆ ಧನ್ಯವಾದ ಹೇಳುವ ಸೌಜನ್ಯ ತೋರಿರಲಿಲ್ಲ.
ಕಳೆದ 2025ರ ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭೀಕರ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಸಿಂಧೂ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಅಂದು ಪ್ರಧಾನಿ ನರೇಂದ್ರ ಮೋದಿ ಅವರು “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಕಠಿಣ ಸಂದೇಶ ನೀಡಿದ್ದರು. ಈ ಅಮಾನತಿನ ನಂತರ ಭಾರತವು ಪಶ್ಚಿಮದ ನದಿಗಳ ನೀರಿನ ಮಟ್ಟದ ದೈನಂದಿನ ದತ್ತಾಂಶಗಳನ್ನು ಪಾಕಿಸ್ತಾನಕ್ಕೆ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ೧೯೬೦ ರಲ್ಲಿ ಸಹಿಯಾದ ಈ ಒಪ್ಪಂದವು ಈ ಹಿಂದಿನ ಹಲವು ಯುದ್ಧಗಳ ಸಂದರ್ಭದಲ್ಲೂ ಮುರಿದುಬಿದ್ದಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ನಿರಂತರ ಹಗೆತನದ ನಡುವೆಯೂ, ಭೌಗೋಳಿಕ ಪರಿಸ್ಥಿತಿ ಮತ್ತು ನದಿಗಳ ನೈಸರ್ಗಿಕ ಹರಿವಿನ ಕಾರಣದಿಂದಾಗಿ ಭಾರತವು ಮುನ್ನೆಚ್ಚರಿಕೆ ನೀಡುವ ಮೂಲಕ ಉನ್ನತ ರಾಜತಾಂತ್ರಿಕ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿನ ಎದುರು ಪ್ರದರ್ಶಿಸಿದೆ.
