ಚೆನ್ನೈ: ತಮಿಳುನಾಡಿನ ಇತ್ತೀಚಿನ ರಾಜಕೀಯ ಆಡಳಿತ ಬದಲಾವಣೆಯ ನಂತರ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಮರ ತಾರಕಕ್ಕೇರಿದೆ. ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ವಿರುದ್ಧ ಡಿಎಂಕೆ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ (MK Stalin) ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ನಟ ವಿಜಯ್ ಅವರ ನೇತೃತ್ವದ ಈ ಹೊಸ ಆಡಳಿತವು ತನ್ನ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದಿರುವ ಅವರು, ಪ್ರಸ್ತುತ ಸರ್ಕಾರವು ಡಿಎಂಕೆ ಪಕ್ಷದ ಕರುಣೆಯಿಂದ ಅಸ್ತಿತ್ವದಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
ಇದೊಂದು ಸುನಾಮಿ ಅಷ್ಟೇ ಎಂದ ಸ್ಟಾಲಿನ್
ರಾಜ್ಯದಲ್ಲಿ ಸದ್ಯ ಉಂಟಾಗಿರುವುದು ರಾಜಕೀಯ ಬದಲಾವಣೆಯ ಅಲೆಯಲ್ಲ, ಬದಲಿಗೆ ಕೇವಲ ಸಿನಿಮಾ ಗೀಳಿನಿಂದ ಸೃಷ್ಟಿಯಾಗಿರುವ ಸುನಾಮಿ ಅಷ್ಟೇ ಎಂದು ಸ್ಟಾಲಿನ್ ಟೀಕಿಸಿದ್ದಾರೆ. ಮತದಾರರು ಕೇವಲ ತಮ್ಮ ನೆಚ್ಚಿನ ನಟ ರಾಜಕೀಯಕ್ಕೆ ಬಂದಿದ್ದಾರೆ ಎಂಬ ತಾತ್ಕಾಲಿಕ ಉತ್ಸಾಹದಿಂದ ಮತ ಚಲಾಯಿಸಿದ್ದಾರೆಯೇ ಹೊರತು, ಯಾವುದೇ ಸಿದ್ಧಾಂತ ಅಥವಾ ರಾಜಕೀಯ ಬದ್ಧತೆಯಿಂದಲ್ಲ. ಜನರು ಅತಿ ಶೀಘ್ರದಲ್ಲೇ ಈ ಭ್ರಮೆಯಿಂದ ಹೊರಬರಲಿದ್ದಾರೆ. ಮಗುವು ಕೊನೆಗೆ ತಾಯಿಯನ್ನೇ ಹುಡುಕಿಕೊಂಡು ಬರುವಂತೆ, ತಮಿಳುನಾಡಿನ ಜನತೆ ಮರಳಿ ಡಿಎಂಕೆ ಪಕ್ಷವನ್ನೇ ಆಶ್ರಯಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಕ್ಷೇತ್ರಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದ 118 ರ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ವಿಫಲವಾಗಿತ್ತು. ಸದ್ಯ ಚುನಾವಣೋತ್ತರ ಮೈತ್ರಿ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸಿಎಂ ಗದ್ದುಗೆ ಏರಿದ್ದಾರೆ. ಇದನ್ನು ಪ್ರಸ್ತಾಪಿಸಿದ ಸ್ಟಾಲಿನ್, ಟಿವಿಕೆಗೆ ಸ್ವಂತ ಬಲದ ಬಹುಮತವಿಲ್ಲ. ನಮ್ಮ ಕರುಣೆಯಿಂದಾಗಿ ಅವರು ಇಂದು ಅಧಿಕಾರ ನಡೆಸುತ್ತಿದ್ದಾರೆ. ಈ ಸಮ್ಮಿಶ್ರ ಸರ್ಕಾರವು ಯಾವಾಗ ಬೇಕಾದರೂ ಪತನಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
ಈ ಹಿಂದೆ ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ಆರಂಭದಲ್ಲಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಕೇವಲ ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿದ್ದವು. ಆದರೆ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ವಿಜಯ್ ಸಂಪುಟವನ್ನು ಸೇರಿಕೊಂಡಿವೆ. ಸದ್ಯದ ರಾಜಕೀಯ ಪರಿಸ್ಥಿತಿ ತೀರಾ ಅಸ್ಥಿರವಾಗಿದ್ದು, ಎಐಎಡಿಎಂಕೆ (AIADMK) ಪಕ್ಷವನ್ನು ಇಭ್ಭಾಗ ಮಾಡಲು ನಡೆಸಿದ ಪ್ರಯತ್ನಗಳೂ ವಿಫಲವಾಗಿವೆ. ತಮಿಳುನಾಡು ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳಾಗಲಿದ್ದು, ಈ ಸರ್ಕಾರ ಐದು ವರ್ಷ ಮುಗಿಸಲ್ಲ ಎಂದು ಸ್ಟಾಲಿನ್ ಪುನರುಚ್ಚರಿಸಿದ್ದಾರೆ.
ಕಳೆದ ೨೦೨೧ ರ ಚುನಾವಣೆಯಲ್ಲಿ ೧೩೩ ಸೀಟುಗಳನ್ನು ಗೆದ್ದು ಬೀಗಿದ್ದ ಡಿಎಂಕೆ, ಈ ಬಾರಿ ಕೇವಲ 56 ಸ್ಥಾನಗಳಿಗೆ ಕುಸಿಯುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ. ಸ್ವತಃ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಿಂದ ಪರಾಭವಗೊಂಡಿರುವುದು ಪಕ್ಷಕ್ಕೆ ಭಾರಿ ಆಘಾತ ತಂದಿದೆ. ಈ ಹಿನ್ನಡೆಯ ನಡುವೆಯೂ, ವಿಜಯ್ ನೇತೃತ್ವದ ನೂತನ ಸಮ್ಮಿಶ್ರ ಸರ್ಕಾರವನ್ನು ಆರಂಭಿಕ ಹಂತದಲ್ಲೇ ಇಕ್ಕಟ್ಟಿಗೆ ಸಿಲುಕಿಸಲು ಡಿಎಂಕೆ ಹೊಸ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
