Rahul Gandhi: ಮೋದಿ ಸರ್ಕಾರ ಪತನ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ

bjp leaders angry reaction about rahul gandhi statement

ನವದೆಹಲಿ: ಮುಂಬರುವ ಒಂದು ವರ್ಷದ ಒಳಗಾಗಿ ಕೇಂದ್ರದ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಯು ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ದೇಶದಲ್ಲಿ ಅರಾಜಕತೆ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ದೊಡ್ಡ ಸಂಚು ರೂಪಿಸುತ್ತಿದ್ದಾರೆ ಎಂದು ಗಂಭೀರವಾಗಿ ಹರಿಹಾಯ್ದಿದೆ. ಕಾಂಗ್ರೆಸ್‌ನ ಅಲ್ಪಸಂಖ್ಯಾತರ ವಿಭಾಗದ ಸಲಹಾ ಮಂಡಳಿಯ ಸಭೆಯಲ್ಲಿ ರಾಹುಲ್ ಗಾಂಧಿ ಈ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದ ಸಂಬಿತ್ ಪಾತ್ರ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.

ವಿಪಕ್ಷಗಳು ಪಿತೂರಿ ನಡೆಸುತ್ತಿದೆ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಅಸಮಾಧಾನ ಹೊರಹಾಕಿದ್ದು, ರಾಹುಲ್ ಗಾಂಧಿ ಅವರ ಮಾತುಗಳು ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳು ಸೇರಿಕೊಂಡು ನಡೆಸುತ್ತಿರುವ ಭಾರಿ ಪಿತೂರಿಯನ್ನು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ. ಭಾರತವನ್ನು ಅಸ್ಥಿರಗೊಳಿಸುವುದೇ ಈ ‘ಟೂಲ್‌ಕಿಟ್ ಗ್ಯಾಂಗ್’ನ ಮುಖ್ಯ ಉದ್ದೇಶವಾಗಿದೆ. ನೇರ ಚುನಾವಣಾ ಕಣದಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಾಗದ ವಿಪಕ್ಷಗಳು, ಈಗ ದೇಶಾದ್ಯಂತ ಹಿಂಸಾಚಾರದ ಕಿಡಿ ಹೊತ್ತಿಸಲು ಯತ್ನಿಸುತ್ತಿವೆ. ಆದರೆ ಭಾರತದ ಪ್ರಜ್ಞಾವಂತ ಜನತೆ ಇವರ ನೈಜ ಸ್ವರೂಪವನ್ನು ಅರಿತಿದ್ದು, ದೇಶಕ್ಕೆ ಹಾನಿ ಮಾಡಲು ಹೊರಟಿರುವ ಇಂಡಿ ಮೈತ್ರಿಕೂಟದ (INDI Alliance) ಈ ಸಂಚು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಇದೇ ವಿಷಯವಾಗಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಸಂಬಿತ್ ಪಾತ್ರ, ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ದಂಗೆಗಳನ್ನು ಎಬ್ಬಿಸುವ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳಿಗೆ ಧನಸಹಾಯ ನೀಡುವ ಜಾರ್ಜ್ ಸೊರೊಸ್‌ನಂತಹ ವಿದೇಶಿ ಶಕ್ತಿಗಳ ಅಜೆಂಡಾವನ್ನು ಭಾರತದಲ್ಲಿ ಜಾರಿಗೊಳಿಸಲು ಈ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಸಂಘರ್ಷ ಎದುರಿಸುತ್ತಿದ್ದರೂ, ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ನಿರಂತರವಾಗಿ ಮುನ್ನಡೆಯುತ್ತಿದೆ. ದೇಶದ ಜನರ ಆಶೀರ್ವಾದ ಮತ್ತು ಸಂವಿಧಾನದ ಬಲ ಇರುವವರೆಗೂ ಯಾವುದೇ ವಿದೇಶಿ ಮಾಲೀಕರು ಭಾರತಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಇರಾನ್ ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕ ಪ್ರಯತ್ನ: ಮುಂದಿನ ಕೆಲವು ಗಂಟೆಗಳಲ್ಲಿ ಜಗತ್ತಿಗೆ ಶುಭ ಸುದ್ದಿ ಎಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ

Leave a Reply

Your email address will not be published. Required fields are marked *