ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ ಹೆಚ್ಚುತ್ತಿರುವುದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ನೆರವಾಗಲು ರಾಜ್ಯ ಸರ್ಕಾರವು ತನ್ನ ಪಾಲಿನ ವ್ಯಾಟ್ (ತೆರಿಗೆ) ಅನ್ನು ತಕ್ಷಣವೇ ಕಡಿತಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹೆಚ್ಚುತ್ತಿರುವುದು ನಿಜವಾದರೂ, ರಾಜ್ಯ ಸರ್ಕಾರ ತೆರಿಗೆ ತಗ್ಗಿಸುವ ಮೂಲಕ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದಿದ್ದಾರೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿರುವ ಅವರು, ಅಂತರರಾಷ್ಟ್ರೀಯ ವಿಚಾರಗಳನ್ನು ಬದಿಗಿಟ್ಟು ಮೊದಲು ರಾಜ್ಯದ ಜನರ ಹಿತ ಕಾಯುವಂತೆ ಮುಖ್ಯಮಂತ್ರಿಗಳಿಗೆ ಬುದ್ಧಿ ಹೇಳಿ ಎಂದು ಲೇವಡಿ ಮಾಡಿದ್ದಾರೆ.
ತೆರಿಗೆ ವಿನಾಯಿತಿ ಕೊಡಲ್ಲ ಎಂದ ಸಿಎಂ
ಆದರೆ, ಇಂಧನ ದರ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತೆರಿಗೆ ವಿನಾಯಿತಿ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂಧನಗಳ ಮೇಲಿನ ರಾಜ್ಯದ ಪಾಲಿನ ಮಾರಾಟ ತೆರಿಗೆಯನ್ನು ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳುವ ಮೂಲಕ ಜನಸಾಮಾನ್ಯರ ನಿರೀಕ್ಷೆಗೆ ತಣ್ಣೀರೆರಚಿದ್ದಾರೆ. “ಕೇಂದ್ರ ಸರ್ಕಾರವು ನಿರಂತರವಾಗಿ ತೈಲ ಬೆಲೆಗಳನ್ನು ಹೆಚ್ಚಿಸುತ್ತಾ ಹೋದರೆ, ಅದನ್ನು ಸರಿದೂಗಿಸಲು ನಾವು ಇಲ್ಲಿ ತೆರಿಗೆ ಕಡಿತಗೊಳಿಸುತ್ತಾ ಕೂರಲು ಸಾಧ್ಯವೇ?” ಎಂದು ಸಿಎಂ ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಇಂಧನ ದರಗಳು ಗಗನಕ್ಕೇರಲು ಕೇಂದ್ರದ ತಪ್ಪು ನೀತಿಗಳೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿಗಳು, ಯುಪಿಎ ಆಡಳಿತಾವಧಿಯ ಇಂಧನ ದರಗಳನ್ನು ನೆನಪಿಸಿದ್ದಾರೆ. ಡಾ. ಮನ್ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ 70 ರೂ., ಡೀಸೆಲ್ 48 ರೂ. ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆ ಕೇವಲ 414 ರೂ. ಇತ್ತು. ಆದರೆ ಇಂದು ಇವೆಲ್ಲವುಗಳ ಬೆಲೆ ಜನಸಾಮಾನ್ಯರಿಗೆ ಎಟಕದ ಮಟ್ಟಿಗೆ ಏರಿಕೆಯಾಗಲು ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಬೆಲೆ ಏರಿಕೆ ನಿಯಂತ್ರಣದ ಕುರಿತು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಮೇಲೂ ಸಿಎಂ ಗರಂ ಆಗಿದ್ದಾರೆ. ಕೇಂದ್ರದವರು ಬೆಲೆ ಹೆಚ್ಚಿಸಿದಾಗ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಮಾಧ್ಯಮಗಳಿಗೆ, ಕೇಂದ್ರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಲು ಏಕೆ ಧೈರ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ, ತೈಲ ದರದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಕೆಸರೆರಚಾಟ ಮುಂದುವರಿದಿದ್ದು, ಸದ್ಯಕ್ಕಂತೂ ರಾಜ್ಯ ಸರ್ಕಾರದಿಂದ ತೆರಿಗೆ ಕಡಿತದ ಯಾವುದೇ ಆಶಯವಿಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸಜ್ಜು: ಸಿಎಂ ಸಿದ್ದರಾಮಯ್ಯ
