TOP NEWS

Crime: ಕೊಲ್ಲೂರು ಬಳಿ ಭೀಕರ ಅಪಘಾತ: ಕೇರಳದ ಇಬ್ಬರು ಪ್ರವಾಸಿಗರು ಸಾವು, ಎಂಟು ಜನರಿಗೆ ಗಂಭೀರ ಗಾಯ

Crime deadly road mishap near kolluru temple 2 people lost life 8 injured

ಕುಂದಾಪುರ: ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿಗೆ ಬಂದು ಮರಳಿ ಹೋಗುತ್ತಿದ್ದ ಕೇರಳ ಮೂಲದ ಪ್ರವಾಸಿಗರ ಜೀಪ್ ಹಾಗೂ ಇನ್ಸುಲೇಟರ್ ವಾಹನದ ನಡುವೆ ಭಾನುವಾರ (Crime) ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದ ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳು ಮಣಿಪಾಲ್‌ ಆಸ್ಪತ್ರೆಗೆ ದಾಖಲು

ಕೇರಳ ಮೂಲದ ಜ್ಯೋತಿ (35) ಹಾಗೂ ಆರ್ಯ ಅನೂಪ್ (28) ಅಪಘಾತದಲ್ಲಿ ಜೀವ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಇನ್ನುಳಿದಂತೆ ಪ್ರವಾಸಿಗರಾದ ಅಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಭಿ (36), ಅನೂಪ್ (37), ಜ್ಯೋತಿಷ್ (42) ಮತ್ತು ಜೀಪ್ ಚಾಲಕ ದೇವರಾಜ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಕುಂದಾಪುರ ಹಾಗೂ ಮಣಿಪಾಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರೆಲ್ಲರೂ ಕೇರಳದ ಒಂದೇ ಭಾಗದವರು ಎಂದು ತಿಳಿದುಬಂದಿದೆ.

ಕೊಡಚಾದ್ರಿ ಬೆಟ್ಟವನ್ನು ವೀಕ್ಷಿಸಿ ಕೊಲ್ಲೂರಿನ ಕಡೆಗೆ ಸಾಗುತ್ತಿದ್ದ ಜೀಪ್ ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಗೆ ತೆರಳುತ್ತಿದ್ದ ಇನ್ಸುಲೇಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಂಬ್ಯುಲೆನ್ಸ್‌ ಸಿಗದೆ ಪರದಾಟ

ಈ ಅಪಘಾತದಿಂದ ಗಾಯಗೊಂಡವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಅಲ್ಲಿದ್ದ ಸ್ಥಳೀಯರು ಹರಸಾಹಸ ಮಾಡಿದ ಘಟನೆ ಸಹ ಈ ಸಮಯದಲ್ಲಿ ನಡೆದಿದೆ. ಯಾವುದೇ ಆಂಬ್ಯುಲೆನ್ಸ್‌ ಸಿಗದೇ ಗಾಯಾಳುಗಳನ್ನ ಹಾಗೂ ಮೃತರನ್ನಸ್ಥಳೀಯ ಜೀಪ್‌ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೂಲ ಸೌಕರ್ಯ ವ್ಯವಸ್ಥೆ ಇಲ್ಲದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ದಿನಕ್ಕೆ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಬರುವ ಸ್ಥಳ ಈ ಕೊಲ್ಲೂರು. ಅಲ್ಲಿನ ದೇವಸ್ಥಾನ ಕೂಡ ಸರ್ಕಾರದ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಹೀಗಿದ್ದರೂ ಕೂಡ ಅಗತ್ಯವಾಗಿ ಬೇಕಿರುವ ಯಾವುದೇ ವ್ಯವಸ್ಥೆಗಳು ಅಲ್ಲಿ ಸಿಗುವುದಿಲ್ಲ. ಸರ್ಕಾರದ ಅಧೀನದಲ್ಲಿ ಇದ್ದರೂ ಕೂಡ ಒಂದೂ ಆಂಬ್ಯುಲೆನ್ಸ್‌ ಕೂಡ ಇಲ್ಲದೇ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ದೇವಸ್ಥಾನದಿಂದ ಬರುವ ಹಣವನ್ನ ಸರ್ಕಾರ ಲೆಕ್ಕ ಸಮೇತ ಪಡೆದುಕೊಳ್ಳುತ್ತದೆ. ಆದರೆ ಸುತ್ತ-ಮುತ್ತಲಿನ ಪ್ರದೇಶದ ಜನರಿಗೆ ಹಾಗೂ ಬರುವ ಭಕ್ತರಿಗೆ ಮಾತ್ರ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಈ ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದ ಇನ್ನೆಷ್ಟು ಜನ ಜೀವ ಕಳೆದುಕೊಳ್ಳಬೇಕು ಎಂಬುದು ಸ್ಥಳೀಯರ ಪ್ರಶ್ನೆ ಆಗಿದ್ದು, ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಅಗತ್ಯ ವ್ಯವಸ್ಥೆಗಳನ್ನ ಮಾಡಬೇಕು ಎಂದು ಜನ ಆಗ್ರಹ ಮಾಡಿದ್ದಾರೆ.

ಇನ್ನು ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗಳಾದ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಭೀಮಾ ಶಂಕರ್ ಅವರು ಸಿಬ್ಬಂದಿಯೊಂದಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಆಸ್ಪತ್ರೆಗಳಿಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ್ದಾರೆ. ಈ ಭೀಕರ ಅಪಘಾತದ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ: ಪ್ರಶಾಂತ್‌ ಭಟ್

ಇದನ್ನೂ ಓದಿ: ಕೊಪ್ಪಳದಲ್ಲಿ ಘೋರ ದುರಂತ: ಸೇತುವೆ ಗೋಡೆ ಮುರಿದು ನದಿಗೆ ಉರುಳಿದ ಟ್ರ್ಯಾಕ್ಟರ್

Leave a Reply

Your email address will not be published. Required fields are marked *