ದಾವಣಗೆರೆ: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 7,000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ ಸಮರ್ಥ್ ಮಲ್ಲಿಕಾರ್ಜುನ್ (ಶಾಮನೂರು), ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದಾರೆ. ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಸರ್ವರನ್ನೂ ಪ್ರೀತಿಸುವ ‘ಅಜಾತಶತ್ರು’ ನಾಯಕನಾಗಿ ಹೊರಹೊಮ್ಮುವುದು ನನ್ನ ಆಶಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಾ ಲಭ್ಯವಿರುವ ಶಾಸಕ: ಕ್ಷೇತ್ರದ ಜನರ ಮೇಲೆ ಅತೀವ ವಿಶ್ವಾಸ ವ್ಯಕ್ತಪಡಿಸಿದ ಸಮರ್ಥ್, “ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಜನತೆಗೆ ನಾನು ಸದಾ ಋಣಿ. ನಮ್ಮ ಮನೆಯ ಬಾಗಿಲು ಎಲ್ಲರಿಗೂ ಸದಾ ತೆರೆದಿರುತ್ತದೆ. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಲು ಕ್ಷೇತ್ರದಲ್ಲಿ ಹೈಟೆಕ್ ‘ಜನಸಂಪರ್ಕ ಕಚೇರಿ’ಯನ್ನು ಶೀಘ್ರದಲ್ಲೇ ಆರಂಭಿಸುತ್ತೇನೆ,” ಎಂದು ಭರವಸೆ ನೀಡಿದರು. ಅಲ್ಲದೆ, ನಗರದ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಕೊರತೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಗ್ಯ ಕ್ಷೇತ್ರದಲ್ಲಿನ ವ್ಯವಸ್ಥೆಗಳನ್ನು ಸುಧಾರಿಸುವುದು ನನ್ನ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಚರ್ಚೆ: ಸಮರ್ಥ್ ಅವರ ಈ ಗೆಲುವು ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿಯನ್ನು ಸಾಬೀತುಪಡಿಸಿದೆಯಾದರೂ, ಪಕ್ಷದ ಒಳಗಿನ ಬಣ ರಾಜಕೀಯದ ಬಗ್ಗೆಯೂ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಯಶಸ್ಸು ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರ ಬಣಕ್ಕೆ ಸಂದ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಈ ನಾಯಕರು, ಅಲ್ಪಸಂಖ್ಯಾತ ಮತಗಳ ಧ್ರುವೀಕರಣವನ್ನು ತಡೆದು ಕಾಂಗ್ರೆಸ್ ಪರವಾಗಿ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀರ್ ಬಣಕ್ಕೆ ಮುಖಭಂಗ? ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಣಕ್ಕೆ ಸಮರ್ಥ್ ಗೆಲುವು ತುಸು ಹಿನ್ನಡೆ ತಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅಲ್ಪಸಂಖ್ಯಾತ ಮುಖಂಡರ ಬಂಡಾಯವಿದ್ದರೂ ಸಮರ್ಥ್ ಗೆದ್ದಿರುವುದು, ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ರಿಜ್ವಾನ್ ಮತ್ತು ಸಲೀಂ ಅಹ್ಮದ್ ಬಣದ ಪ್ರಭಾವವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಮರ್ಥ್ ಗೆಲುವು ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವಕ್ಕೆ ನಾಂದಿ ಹಾಡಿದೆ.
