ಗುವಾಹಟಿ: ಅಸ್ಸಾಂ (Assam) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡ ಬೆನ್ನಲ್ಲೇ, ಆಡಳಿತಾತ್ಮಕ ಬದಲಾವಣೆಗಳು ವೇಗ ಪಡೆದುಕೊಂಡಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬುಧವಾರ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಹಂಗಾಮಿ ಸಿಎಂ ಆಗಿ ಮುಂದುವರಿಕೆ: ಗುವಾಹಟಿಯ ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶರ್ಮಾ, ಇಡೀ ಸಚಿವ ಸಂಪುಟದ ಪರವಾಗಿ ರಾಜೀನಾಮೆ ಹಸ್ತಾಂತರಿಸಿದರು. ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವಂತೆ ಅವರಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶರ್ಮಾ, ಕಳೆದ ಐದು ವರ್ಷಗಳ ಯಶಸ್ವಿ ಆಡಳಿತಕ್ಕೆ ಸಹಕರಿಸಿದ ರಾಜ್ಯಪಾಲರಿಗೆ ಧನ್ಯವಾದ ಅರ್ಪಿಸಿದರು.
ನಾಯಕನ ಆಯ್ಕೆಗೆ ವೀಕ್ಷಕರ ನೇಮಕ: ಮುಂದಿನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಪ್ರಕ್ರಿಯೆಗಾಗಿ ಬಿಜೆಪಿ ಹೈಕಮಾಂಡ್ ಕೇಂದ್ರ ವೀಕ್ಷಕರನ್ನು ನೇಮಿಸಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ವಾರಾಂತ್ಯದೊಳಗೆ ಅಸ್ಸಾಂಗೆ ಭೇಟಿ ನೀಡಲಿದ್ದು, ಶಾಸಕಾಂಗ ಪಕ್ಷದ ಸಭೆ ನಡೆಸಿ ನಾಯಕನನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಪ್ರಧಾನಿ ಮೋದಿ ಭಾಗಿ ಸಾಧ್ಯತೆ: ಮೂಲಗಳ ಪ್ರಕಾರ, ಅಸ್ಸಾಂನ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭವು ಮೇ 12 ರಂದು ಅದ್ಧೂರಿಯಾಗಿ ನಡೆಯುವ ಸಾಧ್ಯತೆಯಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಶೀಘ್ರದಲ್ಲೇ ಮೈತ್ರಿಕೂಟದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್ ‘ದಳಪತಿ’ ಆಡಳಿತಕ್ಕೆ ಕಾಂಗ್ರೆಸ್ ಸಾಥ್: ಮೈತ್ರಿ ಸರ್ಕಾರ ರಚನೆಗೆ ಕ್ಷಣಗಣನೆ
