ಮಂಗಳೂರು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ,(Pooja Hegde) ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹುಟ್ಟೂರಾದ ಕರಾವಳಿಯ ಸಂಸ್ಕೃತಿಯನ್ನು ಮರೆತಿಲ್ಲ. ಮುಂಬೈನಲ್ಲಿ ನೆಲೆಸಿದ್ದರೂ ತುಳುನಾಡಿನ ಮಣ್ಣಿನ ನಂಟು ಹೊಂದಿರುವ ಈ ನಟಿ, ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ದೈವಾರಾಧನೆ ಮತ್ತು ದೇವಸ್ಥಾನಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ಇಷ್ಟ ಎಂದ ನಟಿ
ಕನ್ನಡದ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ನಟ ಯಾರು ಎಂಬ ಕುತೂಹಲಕ್ಕೆ ಉತ್ತರಿಸಿರುವ ಪೂಜಾ, ರಾಜ್ ಬಿ ಶೆಟ್ಟಿ ಅವರ ಹೆಸರನ್ನು ಹೇಳಿದ್ದಾರೆ. “ರಾಜ್ ಬಿ ಶೆಟ್ಟಿ ಅವರ ನಟನೆ ನನಗೆ ತುಂಬಾ ಇಷ್ಟ. ಅವರು ಬಹಳ ನೈಜವಾಗಿ ಅಭಿನಯಿಸುತ್ತಾರೆ. ವಿಶೇಷವಾಗಿ ಅವರು ತುಳು ಭಾಷೆಯಲ್ಲಿ ಮಾತನಾಡಿರುವ ಸಿನಿಮಾಗಳನ್ನು ನೋಡಿ ನಾನು ಅವರ ಅಭಿಮಾನಿಯಾಗಿದ್ದೇನೆ” ಎಂದು ಪೂಜಾ ಹೆಗ್ಡೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾದ ಬಗ್ಗೆ ಪೂಜಾ ಮಾತು
ಇದೇ ವೇಳೆ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಬಗ್ಗೆಯೂ ಹೆಮ್ಮೆಯಿಂದ ಮಾತನಾಡಿದ ಅವರು, ಕರಾವಳಿಯ ಭೂತಾರಾಧನೆಯ ಸಂಪ್ರದಾಯವನ್ನು ಈ ಸಿನಿಮಾ ಇಡೀ ಜಗತ್ತಿಗೆ ಪರಿಚಯಿಸಿದೆ. ಇದರಿಂದಾಗಿ ಉತ್ತರ ಭಾರತದ ಮಂದಿ ಕೂಡ ನಮ್ಮ ದೈವಗಳ ಬಗ್ಗೆ ನನ್ನನ್ನು ಕುತೂಹಲದಿಂದ ಪ್ರಶ್ನಿಸುತ್ತಾರೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಕಳೆದ ಬಾಲ್ಯದ ಬೇಸಿಗೆ ರಜೆಗಳು ಮತ್ತು ಕಸಿನ್ಸ್ ಜೊತೆ ಸೇರಿ ನೇರಳೆ ಹಣ್ಣು ತಿಂದ ಸಿಹಿ ನೆನಪುಗಳು ತಮ್ಮಲ್ಲಿ ಇಂದಿಗೂ ಹಸಿರಾಗಿವೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಸದ್ಯ ಪೂಜಾ ಹೆಗ್ಡೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ದುಲ್ಕರ್ ಸಲ್ಮಾನ್ ಜೊತೆಗೆ, ಹಿಂದಿಯಲ್ಲಿ ವರುಣ್ ಧವನ್ ಜೊತೆಗೆ ಮತ್ತು ತಮಿಳಿನ ದೊಡ್ಡ ಚಿತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಸಿನಿಮಾದಲ್ಲಿ ಪೂಜಾ ಯಾವಾಗ ನಟಿಸುತ್ತಾರೆ ಎಂದು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ, ತಮ್ಮ ಇಷ್ಟದ ನಟ ರಾಜ್ ಬಿ ಶೆಟ್ಟಿ ಎಂದು ಹೇಳುವ ಮೂಲಕ ಅವರು ಕನ್ನಡಿಗರ ಮನಗೆದ್ದಿದ್ದಾರೆ.
ಇದನ್ನೂ ಓದಿ: ಫೋಟೋಗಳ ಅಶ್ಲೀಲವಾಗಿ ಬಳಕೆ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಕಪೂರ್
