ಬೆಂಗಳೂರು: ‘ಕಾಂತಾರ’ ಚಲನಚಿತ್ರದ ದೃಶ್ಯವೊಂದನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ತಮ್ಮ ಕ್ಷಮೆಯಾಚನೆ ಪತ್ರವನ್ನು (ಅಫಿಡವಿಟ್) ದೂರುದಾರರ ಸಮಾಧಾನಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು ನ್ಯಾಯಾಲಯಕ್ಕೆ ಈ ಭರವಸೆ ನೀಡಿದ್ದಾರೆ.
ಕಳೆದ ವರ್ಷ ಮಿಮಿಕ್ರಿ ಮಾಡಿದ್ದ ನಟ
ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ರಣವೀರ್ ಸಿಂಗ್, ನಟ ರಿಷಬ್ ಶೆಟ್ಟಿ ಅವರ ಪಾತ್ರವನ್ನು ಅನುಕರಿಸಿದ್ದರು. ಈ ವೇಳೆ ದೈವದ ಕುರಿತು ಆಕ್ಷೇಪಾರ್ಹ ಪದ ಬಳಸಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯವು ಕ್ಷಮೆಯಾಚಿಸಲು ಸೂಚಿಸಿದ ಹಿನ್ನೆಲೆಯಲ್ಲಿ ನಟ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಈ ಅಫಿಡವಿಟ್ನಲ್ಲಿ ಪ್ರಾಮಾಣಿಕವಾದ ಪಶ್ಚಾತ್ತಾಪವಿಲ್ಲ ಮತ್ತು ಸ್ಪಷ್ಟತೆಯಿಲ್ಲ ಎಂದು ದೂರುದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಾಜನ್ ಪೂವಯ್ಯ ಅವರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠಕ್ಕೆ ಮಾಹಿತಿ ನೀಡಿ, ನಟರು ಈಗಾಗಲೇ ಬೇಷರತ್ ಕ್ಷಮೆಯಾಚಿಸಿದ್ದಾರೆ ಮತ್ತು ಸಂಬಂಧಪಟ್ಟ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದರು. ಆದರೆ ದೂರುದಾರರ ವಕೀಲರು, ನಟನ ಅಫಿಡವಿಟ್ನಲ್ಲಿನ ಪದ ಬಳಕೆಗಳು ದೂರುದಾರರ ಮನವೊಲಿಸುವಲ್ಲಿ ವಿಫಲವಾಗಿವೆ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ದೂರುದಾರರೊಂದಿಗೆ ಚರ್ಚಿಸಿ, ಅವರ ಆಕ್ಷೇಪಗಳನ್ನು ದೂರ ಮಾಡುವ ರೀತಿಯಲ್ಲಿ ಹೊಸದಾಗಿ ಅಫಿಡವಿಟ್ ಸಿದ್ಧಪಡಿಸುವುದಾಗಿ ಪೂವಯ್ಯ ತಿಳಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ದೂರುದಾರರು ಸಮಾಧಾನಗೊಳ್ಳುವ ರೀತಿಯಲ್ಲಿ ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ. ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದ ರಣವೀರ್ ಸಿಂಗ್, ಈಗ ನ್ಯಾಯಾಲಯದ ಸೂಚನೆಯಂತೆ ಕಾನೂನುಬದ್ಧವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಹೊಸ ಅಫಿಡವಿಟ್ ಸಲ್ಲಿಸಬೇಕಿದೆ. ಈ ಪ್ರಕ್ರಿಯೆಯ ನಂತರವಷ್ಟೇ ಪ್ರಕರಣದ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಜಾಂಬಿ ಡ್ರಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟ ದುನಿಯಾ ವಿಜಯ್
