Iran: ಹಾರ್ಮುಜ್ ಬದಲು ಪರ್ಯಾಯ ಮಾರ್ಗ ನೀಡಿದ ಇರಾನ್

iran Alternate Shipping Routes

ಇರಾನ್: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ (Iran) ಗುರುವಾರ ಹೊಸ ಸಂಚಾರ ನಿಯಮಗಳನ್ನು ಪ್ರಕಟಿಸಿದೆ.

ಗಮನ ಸೆಳೆದ ಇರಾನ್‌ ನಿರ್ಧಾರ

ಜಲಸಂಧಿಯ ಮುಖ್ಯ ಭಾಗದಲ್ಲಿ ಕಡಲ ಮೈನ್‌ಗಳು ಇರುವ ಭೀತಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಡಗುಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಇರಾನ್ ಸೂಚಿಸಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು ಶೇಕಡಾ 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ ಇರಾನ್‌ನ ಈ ನಿರ್ಧಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈ ಕುರಿತು ಮಾಹಿತಿ ನೀಡಿದ್ದು, ಕಡಲ ಸುರಕ್ಷತೆಯನ್ನು ಕಾಪಾಡಲು ಮತ್ತು ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಹಡಗುಗಳು ಹೊಸದಾಗಿ ಸೂಚಿಸಲಾದ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯುವ ಕೆಲವೇ ಕ್ಷಣಗಳ ಮೊದಲು ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಹಿನ್ನೆಲೆಯಲ್ಲಿ ಇರಾನ್ ತಾತ್ಕಾಲಿಕವಾಗಿ ಜಲಸಂಧಿಯನ್ನು ತೆರೆಯಲು ಸಮ್ಮತಿಸಿದೆ.

ಮಾರ್ಚ್ ಆರಂಭದಿಂದ ಇರಾನ್ ಈ ಪ್ರಮುಖ ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದ್ದವು. ಇದೀಗ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮವು ಜಾಗತಿಕ ತೈಲ ಮಾರುಕಟ್ಟೆಗೆ ತುಸು ನಿರಾಳತೆ ತಂದಿದೆ. ಆದರೂ ಸಮುದ್ರದಲ್ಲಿ ಮೈನ್‌ಗಳ ಅಪಾಯವಿರುವುದರಿಂದ ಹಡಗುಗಳ ಸಂಚಾರಕ್ಕೆ ಇರಾನ್ ಹೊಸ ಸುರಕ್ಷಿತ ಮಾರ್ಗಗಳನ್ನು ತೋರಿಸಿಕೊಟ್ಟಿದ್ದು, ಜಾಗತಿಕ ಇಂಧನ ಬಿಕ್ಕಟ್ಟು ಶಮನಗೊಳಿಸಲು ಮುಂದಾಗಿದೆ.

ಇದನ್ನೂ ಓದಿ: ನ್ಯಾಯಾಂಗ ಅಧಿಕಾರಿಗಳ ಹಲ್ಲೆ ಪ್ರಕರಣ, ತನಿಖೆ ಚುರುಕುಗೊಳಿಸಿದ NIA

Leave a Reply

Your email address will not be published. Required fields are marked *