TOP NEWS

Wipro: ಐಟಿ ವಲಯದಲ್ಲಿ ತಲ್ಲಣ: ವಿಪ್ರೋ ಮಾಜಿ ಉದ್ಯೋಗಿಗೆ ಮತಾಂತರಕ್ಕೆ ಒತ್ತಡ ಹಾಗೂ ಕಿರುಕುಳ ಆರೋಪ,

Women accused Wipro company firing because refusing to convert into islam

ಪುಣೆ: ಇತ್ತೀಚೆಗಷ್ಟೇ ನಾಸಿಕ್‌ನ ಟಿಸಿಎಸ್ ಸಂಸ್ಥೆ ಹಾಗೂ ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದ್ದ ವಿವಾದಾತ್ಮಕ ಘಟನೆಗಳ ಬೆನ್ನಲ್ಲೇ, ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಪ್ರಖ್ಯಾತ ಐಟಿ ಸಂಸ್ಥೆ ‘ವಿಪ್ರೋ’ (Wipro) ನಿಂದ ಅತ್ಯಂತ ಗಂಭೀರ ಮಾದರಿಯ ಧಾರ್ಮಿಕ ಕಿರುಕುಳ ಮತ್ತು ಕಾರ್ಪೊರೇಟ್ ತಾರತಮ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಪುಣೆಯ ಹಿಂಜವಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಸಂತ್ರಸ್ತ ಹಿಂದೂ ಯುವತಿಯು ಹಿಂದೂ ಜನಜಾಗೃತಿ ಸಮಿತಿ (HJS) ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಖುದ್ದಾಗಿ ಭಾಗವಹಿಸಿ ತನಗಾದ ಅನ್ಯಾಯವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಈ ಇಡೀ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಸುನಿಲ್ ಘಾನ್ವತ್ ಅವರು, ಈ ವಿಷಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಕ್ಷಣವೇ ಹಸ್ತಕ್ಷೇಪ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಪೊರೇಟ್ ವಲಯದಲ್ಲಿ ಹಿಂದೂ ಮಹಿಳೆಯರ ಸುರಕ್ಷತೆ ದೊಡ್ಡ ಪ್ರಶ್ನೆಯಾಗುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪುಣೆಯ ಶ್ರಮಿಕ್ ಪತ್ರಕರ್ ಭವನದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ವಿಪ್ರೋ ಸಂಸ್ಥೆಯ ಮಾಜಿ ಉದ್ಯೋಗಿಯಾಗಿರುವ ಸಂತ್ರಸ್ತೆ, ಹೆಚ್‌ಜೆಎಸ್‌ನ ಪುಣೆ ಜಿಲ್ಲಾ ಸಂಯೋಜಕ ಪರಾಗ್ ಗೋಖಲೆ, ವಕೀಲರಾದ ವಿವೇಕ್ ಭೋಸಲೆ ಹಾಗೂ ಕ್ರಾಂತಿ ಪೇಟ್ಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ತೀವ್ರ ಮಾನಸಿಕ ಒತ್ತಡ

ವಿಪ್ರೋ ಕಂಪನಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ತನಗೆ, ಅಲ್ಲಿನ ಸಹೋದ್ಯೋಗಿಯೊಬ್ಬರಿಂದಲೇ ಭೀಕರ ಧಾರ್ಮಿಕ ಕಿರುಕುಳ ಎದುರಾಗಿತ್ತು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಹೀನಾ ರಫೀಕ್ ಎಂಬ ಮಹಿಳಾ ಉದ್ಯೋಗಿ, ತನ್ನ ವೈಯಕ್ತಿಕ ಜೀವನದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಳು. ಶೇಖ್ ಎಂಬ ಮುಸ್ಲಿಂ ಯುವಕನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಹಾಗೂ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಆಕೆ ನಿರಂತರವಾಗಿ ಬಲವಂತ ಮಾಡುತ್ತಿದ್ದಳು. ಒಂದು ವೇಳೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಆ ಯುವಕನೊಂದಿಗೆ ಬಾಳಿದರೆ ದುಬೈನಲ್ಲಿ ಅತ್ಯಂತ ಐಷಾರಾಮಿ ಮತ್ತು ಆರಾಮದಾಯಕ ಜೀವನ ನಡೆಸಬಹುದು ಎಂಬ ಆಮಿಷವನ್ನೂ ಒಡ್ಡಲಾಗಿತ್ತು. ಈ ಧಾರ್ಮಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ, ಕೆಲಸದ ಹೊರತಾಗಿ ಶಹೀನಾ ಜೊತೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಈ ಗಂಭೀರ ವಿಷಯದ ಕುರಿತು ಸಂತ್ರಸ್ತ ಯುವತಿಯು ವಿಪ್ರೋ ಕಂಪನಿಯ ಹಿರಿಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಲಿಖಿತವಾಗಿ ದೂರು ನೀಡಿದ್ದರು. ಆದರೆ ವಿಪ್ರೋ ಆಡಳಿತ ಮಂಡಳಿಯು ಶಹೀನಾ ರಫೀಕ್ ವಿರುದ್ಧ ಯಾವುದೇ ಶಿಸ್ತು ಕ್ರಮ ಅಥವಾ ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಶಹೀನಾ, ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದ್ದ ಮತ್ತು ಎಡಿಟ್ ಮಾಡಲಾದ ಆಡಿಯೋ ಸಂಭಾಷಣೆಗಳನ್ನು ಮುಂದಿಟ್ಟುಕೊಂಡು ಸಂತ್ರಸ್ತೆಯ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಳು. ವಿಪ್ರೋ ಸಂಸ್ಥೆಯ ಹ್ಯೂಮನ್ ರಿಸೋರ್ಸ್ (HR) ವಿಭಾಗ ಮತ್ತು ಆಡಳಿತ ಸಮಿತಿಯು ಸಂತ್ರಸ್ತೆ ನೀಡಿದ ಸಾಕ್ಷ್ಯಾಧಾರಗಳನ್ನು ಸಂಪೂರ್ಣವಾಗಿ ಬದಿಗೊತ್ತಿ, ಶಹೀನಾ ಪರವಾಗಿ ನಿಂತು ಏಕಪಕ್ಷೀಯ ಕ್ರಮ ಕೈಗೊಂಡಿದೆ ಎಂದು ಯುವತಿ ಕಣ್ಣೀರಿಟ್ಟಿದ್ದಾರೆ.

ಬಲವಂತದ ರಾಜೀನಾಮೆ ಹಾಗೂ 50 ಲಕ್ಷ ರೂ. ಪರಿಹಾರಕ್ಕೆ ಲೀಗಲ್ ನೋಟಿಸ್

ಕಳೆದ 2025ರ ಆಗಸ್ಟ್ ಅಂತ್ಯದಲ್ಲಿ ವಿಪ್ರೋ ಸಂಸ್ಥೆಯ ಹೆಚ್‌ಆರ್ ಪ್ರತಿನಿಧಿ ಪ್ರಶಾಂತ್ ಜಿ.ಆರ್ ಎಂಬುವವರು ಮೈಕ್ರೋಸಾಫ್ಟ್ ಟೀಮ್ಸ್ ಮೀಟಿಂಗ್ ನೆಪದಲ್ಲಿ ತಾಂತ್ರಿಕ ವಿಧಾನಗಳನ್ನು ಬಳಸಿ ಸಂತ್ರಸ್ತೆಯ ಲ್ಯಾಪ್‌ಟಾಪ್ ಪರದೆಯನ್ನು (Screen Control) ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಯಾವುದೇ ಪೂರ್ವಾಪರ ನೋಟಿಸ್ ನೀಡದೆ, ಆಕೆಯ ಒಪ್ಪಿಗೆಯೂ ಇಲ್ಲದೆ ಬಲವಂತವಾಗಿ ಲ್ಯಾಪ್‌ಟಾಪ್ ಮೂಲಕವೇ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ ವಕೀಲ ವಿವೇಕ್ ಭೋಸಲೆ, ನೌಕರನಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡದೆ, ನೈಸರ್ಗಿಕ ನ್ಯಾಯದ ತತ್ವಗಳನ್ನು ಗಾಳಿಗೆ ತೂರಿ ಬಲವಂತವಾಗಿ ರಾಜೀನಾಮೆ ಪಡೆಯುವುದು ಭಾರತೀಯ ಕಾರ್ಮಿಕ ಮತ್ತು ಉದ್ಯೋಗ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಅನ್ಯಾಯದ ವಿರುದ್ಧ ಸಂತ್ರಸ್ತೆಯು ತನ್ನ ವಕೀಲರ ಮೂಲಕ ವಿಪ್ರೋ ಕಂಪನಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ತನಗಾದ ತೀವ್ರ ಮಾನಸಿಕ ಸಂಕಟ ಮತ್ತು ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿರುವುದಕ್ಕೆ ಬಿಗ್ ಬಾಸ್ ಮಾದರಿಯಲ್ಲಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಒತ್ತಡದ ಹೇರಿ ಪಡೆದ ಕಾನೂನುಬಾಹಿರ ರಾಜೀನಾಮೆಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಪೂರ್ಣ ವೇತನ ಹಾಗೂ ಸೇವಾ ಸೌಲಭ್ಯಗಳೊಂದಿಗೆ ತಮ್ಮನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ. ಇದರೊಂದಿಗೆ ಕಂಪನಿಯು ಲಿಖಿತವಾಗಿ ಕ್ಷಮೆಯಾಚಿಸಬೇಕು ಹಾಗೂ ಕಿರುಕುಳ ನೀಡಿದ ಶಹೀನಾ ರಫೀಕ್ ಮತ್ತು ಆಕೆಗೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಳಲಾಗಿದೆ. 15 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಿವಿಲ್, ಕ್ರಿಮಿನಲ್ ಮತ್ತು ಕಾರ್ಮಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಸಂತ್ರಸ್ತೆ ಎಚ್ಚರಿಸಿದ್ದಾರೆ. ಈ ಇಡೀ ಜಾಲವನ್ನು ‘ಕಾರ್ಪೊರೇಟ್ ಜಿಹಾದ್’ ನ ಭಾಗ ಎಂದು ಕರೆದಿರುವ ಹಿಂದೂ ಜನಜಾಗೃತಿ ಸಮಿತಿಯು, ಸಂತ್ರಸ್ತೆಯ ನ್ಯಾಯಯುತ ಹೋರಾಟಕ್ಕೆ ತಾನು ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಉಪಚುನಾವಣೆ ಕಣಕ್ಕೆ ರಾಘವ ಲಾರೆನ್ಸ್? ಟಿವಿಕೆ ಮುಖ್ಯಸ್ಥ ವಿಜಯ್ ಹೊಸ ರಾಜಕೀಯ ನಡೆ

Leave a Reply

Your email address will not be published. Required fields are marked *