ಕೋಲ್ಕತ್ತಾ: ಬಂಗಾಳದ (West Bengal) ರಾಜಕೀಯ ಸಂಘರ್ಷಕ್ಕೆ ಈಗ ಬಿಜೆಪಿ ನಾಯಕನ ಆಪ್ತ ಬಲಿಯಾಗಿದ್ದು, ಪ್ರಕರಣದ ಗಂಭೀರತೆ ಅರಿತ ಪೊಲೀಸರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದ ಈ ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿದೆ.
ದಾಳಿ ನಡೆದಿದ್ದು ಹೇಗೆ? ಬುಧವಾರ ತಡರಾತ್ರಿ 10:30ರ ಸುಮಾರಿಗೆ ಚಂದ್ರನಾಥ್ ರಥ್ ಅವರು ಕೋಲ್ಕತ್ತಾದಿಂದ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಮಧ್ಯಮಗ್ರಾಮದ ದೋಹ್ರಿಯಾ ಬಳಿ ಅಜ್ಞಾತ ಕಾರೊಂದು ಇವರ ವಾಹನವನ್ನು ಅಡ್ಡಗಟ್ಟಿದೆ. ತಕ್ಷಣವೇ ಬೈಕ್ನಲ್ಲಿ ಬಂದ ಶೂಟರ್ಗಳು ಚಂದ್ರನಾಥ್ ಅವರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಮುಖ ಮತ್ತು ಎದೆಗೆ ತೀವ್ರ ಗಾಯಗಳಾಗಿದ್ದ ಚಂದ್ರನಾಥ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟರೆ, ಅವರ ಚಾಲಕ ಪ್ರಾಣಾಪಾಯದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ಐಟಿ ತನಿಖೆಯ ವಿವರ: ಕೊಲೆಯ ಹಿಂದಿರುವ ಪಿತೂರಿಯನ್ನು ಭೇದಿಸಲು ಇನ್ಸ್ಪೆಕ್ಟರ್ ಜನರಲ್ (IG) ದರ್ಜೆಯ ಅಧಿಕಾರಿಯ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ರಾಜ್ಯದ ವಿವಿಧ ಭಾಗಗಳ ನುರಿತ ಅಧಿಕಾರಿಗಳಿದ್ದಾರೆ. ಈಗಾಗಲೇ ಮೂವರು ಕುಖ್ಯಾತ ರೌಡಿಶೀಟರ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಶೂಟರ್ಗಳ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಈ ಕೊಲೆಯನ್ನು ಖಂಡಿಸಿ ಪಶ್ಚಿಮ ಮೇದಿನಿಪುರ ಸೇರಿದಂತೆ ಬಂಗಾಳದಾದ್ಯಂತ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಲ್ಬೋನಿಯಲ್ಲಿ ರಸ್ತೆ ತಡೆ ನಡೆಸಿದ ನೂರಾರು ಬೆಂಬಲಿಗರು, ಈ ಕೃತ್ಯದ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಗಾಗಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದ್ದು, ಹೊಸ ಸರ್ಕಾರದ ಪದಗ್ರಹಣದ ಹೊತ್ತಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆತಂಕ ಮೂಡಿಸಿದೆ.
