TOP NEWS

West Bengal: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ, 200ರ ಸನಿಹದಲ್ಲಿ ಕೇಸರಿ ಪಡೆ

west bengal assembly election bjp historical victory

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಇಂದು ಬೃಹತ್‌ ರಾಜಕೀಯ ಬದಲಾವಣೆ ಕಂಡುಬರುತ್ತಿದೆ. ಮಧ್ಯಾಹ್ನದ ಅಪ್‌ಡೇಟ್ ಪ್ರಕಾರ, 293 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 192 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಬ್ಬರಿಸುತ್ತಿದ್ದು, ತೃಣಮೂಲ ಕಾಂಗ್ರೆಸ್‌ ಭದ್ರಕೋಟೆ ಚಿದ್ರಗೊಂಡಿದೆ. ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಬಂಗಾಳದ ಗದ್ದುಗೆ ಏರುವ ಆ ‘ಅದೃಷ್ಟವಂತ’ ನಾಯಕ ಯಾರು ಎಂಬ ಚರ್ಚೆ ಈಗ ಗಲ್ಲಿಯಿಂದ ದಿಲ್ಲಿಯವರೆಗೆ ಶುರುವಾಗಿದೆ.

ಸಿಎಂ ಕುರ್ಚಿಗಾಗಿ ದೆಹಲಿ ಮಟ್ಟದಲ್ಲಿ ಆರಂಭವಾಯ್ತು ಕಸರತ್ತು!

ರಾಜ್ಯದಲ್ಲಿ ಕೇಸರಿ ಬಾವುಟ ಹಾರುವುದು ಬಹುತೇಕ ಖಚಿತವಾಗುತ್ತಿದ್ದಂತೆ, ಮುಖ್ಯಮಂತ್ರಿ ರೇಸ್‌ನಲ್ಲಿ ಕೆಲವು ಪ್ರಭಾವಿ ಹೆಸರುಗಳು ಕೇಳಿಬರುತ್ತಿವೆ:

  • ಸುವೇಂದು ಅಧಿಕಾರಿ: ಈ ಚುನಾವಣೆಯ ‘ರಿಯಲ್ ಹೀರೋ’ ಎಂದೇ ಬಿಂಬಿತವಾಗಿರುವ ಸುವೇಂದು, ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕಡೆ ತೊಡೆತಟ್ಟಿ ನಿಂತವರು. ಸದ್ಯಕ್ಕೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಇವರು ಮುಂಚೂಣಿಯಲ್ಲಿದ್ದಾರೆ.
  • ಸಮಿಕ್ ಭಟ್ಟಾಚಾರ್ಯ: ಸಂಘ ಪರಿವಾರದ ಹಿನ್ನೆಲೆಯುಳ್ಳ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಅವರ ಹೆಸರು ಕೂಡ ಜೋರಾಗಿ ಕೇಳಿಬರುತ್ತಿದೆ. ಪಕ್ಷದ ಸಂಘಟನೆಯಲ್ಲಿ ಇವರು ವಹಿಸಿದ ಪಾತ್ರ ದೊಡ್ಡದು.
  • ದಿಲೀಪ್ ಘೋಷ್: ತಳಮಟ್ಟದ ಕಾರ್ಯಕರ್ತರ ಬೆಂಬಲ ಹೊಂದಿರುವ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕೂಡ ರೇಸ್‌ನಲ್ಲಿದ್ದಾರೆ. ಇವರ ಜೊತೆಗೆ ಅಗ್ನಿಮಿತ್ರ ಪಾಲ್, ರೂಪಾ ಗಂಗೂಲಿ ಮತ್ತು ನಿಸಿತ್ ಪ್ರಮಾಣಿಕ್ ಹೆಸರುಗಳು ಕೂಡ ಹೈಕಮಾಂಡ್ ಮಂಡಳಿಯಲ್ಲಿವೆ ಎನ್ನಲಾಗುತ್ತಿದೆ.

ನಂದಿಗ್ರಾಮದಲ್ಲಿ ‘ಸುವೇಂದು’ ಅಬ್ಬರ, ಭವಾನಿಪುರದಲ್ಲಿ ‘ದೀದಿ’ಗೆ ದಿಗಿಲು

ಕ್ಷೇತ್ರವಾರು ಲೆಕ್ಕಾಚಾರಗಳನ್ನು ಗಮನಿಸಿದರೆ, ಮಮತಾ ಬ್ಯಾನರ್ಜಿ ಅವರಿಗೆ ಸ್ವಕ್ಷೇತ್ರದಲ್ಲೇ ಗೆಲುವಿನ ಹಾದಿ ಕಠಿಣವಾಗಿದೆ. ಭವಾನಿಪುರದಲ್ಲಿ ಅವರು ಸುವೇಂದು ವಿರುದ್ಧ ಕೇವಲ 898 ಮತಗಳ ಅಲ್ಪ ಮುನ್ನಡೆ ಹೊಂದಿದ್ದರೆ, ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಅವರು ಟಿಎಂಸಿ ಅಭ್ಯರ್ಥಿ ವಿರುದ್ಧ 3,100 ಮತಗಳ ಬೃಹತ್ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಬಂಗಾಳ ಮತ್ತು ಜಂಗಲ್‌ಮಹಲ್ ಭಾಗಗಳಲ್ಲಿ ಟಿಎಂಸಿ ಸಂಪೂರ್ಣ ನೆಲಕಚ್ಚಿದ್ದು, ಬಿಜೆಪಿ ಪಾರುಪತ್ಯ ಮೆರೆದಿದೆ.

ಇತರ ಕ್ಷೇತ್ರಗಳಲ್ಲೂ ಟಿಎಂಸಿಗೆ ಆಘಾತ ಕಾದಿದೆ. ಆಮ್ ಜನತಾ ಉನ್ನಯನ ಪಕ್ಷದ ಹುಮಾಯೂನ್ ಕಬೀರ್ ಅವರು ಟಿಎಂಸಿ ಅಭ್ಯರ್ಥಿ ವಿರುದ್ಧ ಭಾರಿ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಒಟ್ಟಾರೆಯಾಗಿ ಮತ ಎಣಿಕೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಹೈಕಮಾಂಡ್ ಅಂತಿಮವಾಗಿ ಯಾರಿಗೆ ಪಟ್ಟಾಭಿಷೇಕ ಮಾಡಲಿದೆ ಎಂಬುದು ಈಗ ಕೌತುಕದ ವಿಷಯವಾಗಿದೆ.

ಇದನ್ನೂ ಓದಿ: ತಮಿಳುನಾಡಿನ ‘ಒಂಟಿ ಸಲಗ’ನ ಪಟ್ಟಾಭಿಷೇಕ

Leave a Reply

Your email address will not be published. Required fields are marked *