TOP NEWS

TVK: ತಮಿಳುನಾಡಿನ ‘ಒಂಟಿ ಸಲಗ’ನ ಪಟ್ಟಾಭಿಷೇಕ

TVK vijay old video about talking king goes viral

ಚೆನ್ನೈ: ದ್ರಾವಿಡ ರಾಜಕಾರಣದ ಭದ್ರಕೋಟೆ ತಮಿಳುನಾಡಿನಲ್ಲಿ ಇಂದು ‘ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸುನಾಮಿ ಎದ್ದಿದೆ. ಮತ ಎಣಿಕೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ, ಹಿರಿಯ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ವಿಜಯ್, ಅಚ್ಚರಿಯ ಮುನ್ನಡೆ ಸಾಧಿಸಿದ್ದಾರೆ. ಈ ನಡುವೆ, ಅವರು (‌TVK) ಹಿಂದೆಂದೋ ರ‍್ಯಾಲಿಯಲ್ಲಿ ಹೇಳಿದ್ದ “ಕಾಡಿಗೆ ರಾಜ ಸಿಂಹ ಒಬ್ಬನೇ” ಎಂಬ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ಸಿಂಹವೇ ಕಾಡಿನ ರಾಜ ಎಂದಿದ್ದ ವಿಜಯ್

ಕೇವಲ 16 ಸೆಕೆಂಡುಗಳ ಆ ವಿಡಿಯೋದಲ್ಲಿ, “ಎಷ್ಟೇ ನರಿಗಳ ಗುಂಪು ಬಂದರೂ ಸಿಂಹ ಯಾವತ್ತಿದ್ದರೂ ಕಾಡಿನ ರಾಜ” ಎಂದು ವಿಜಯ್ ವಿರೋಧಿಗಳಿಗೆ ಸವಾಲು ಹಾಕಿದ್ದರು. ಇಂದು ಅವರ ಪಕ್ಷವು ಸಾಧಿಸುತ್ತಿರುವ ಅಭೂತಪೂರ್ವ ಮುನ್ನಡೆ ನೋಡಿದರೆ, ಅಂದಿನ ಅವರ ಮಾತುಗಳು ಇಂದು ಅಕ್ಷರಶಃ ನಿಜವಾದಂತೆ ಕಾಣುತ್ತಿದೆ. ಮೊದಲ ಬಾರಿ ಅಖಾಡಕ್ಕಿಳಿದಿದ್ದರೂ, ದಳಪತಿ ಹಾಕಿದ ರಾಜಕೀಯ ಸ್ಕೆಚ್‌ಗೆ ಹಳೆಯ ಆಟಗಾರರು ಕಂಗಾಲಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ್ ಅವರ ಪಕ್ಷವು ಈಗಾಗಲೇ 107 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಕೇವಲ 11 ಸೀಟುಗಳನ್ನು ಗೆದ್ದರೆ ವಿಜಯ್ ಮ್ಯಾಜಿಕ್ ನಂಬರ್ (118) ದಾಟಲಿದ್ದಾರೆ. ಯಾವುದೇ ಸ್ಟಾರ್ ಪ್ರಚಾರಕರಿಲ್ಲದೆ, ಮೈತ್ರಿಗಳ ಹಂಗಿಲ್ಲದೆ ಒಬ್ಬಂಟಿಯಾಗಿ ಹೋರಾಡಿ ವಿಜಯ್ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಭಾರತೀಯ ರಾಜಕಾರಣದ ದೊಡ್ಡ ಅಚ್ಚರಿಗಳಲ್ಲಿ ಒಂದಾಗಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ಹೇಳಿದಂತೆ, “ನಾನು ಕಿಂಗ್ ಮೇಕರ್ ಆಗಲು ಬಂದಿಲ್ಲ, ಜನಬೆಂಬಲ ಇರುವಾಗ ನಾನೇ ಕಿಂಗ್ ಆಗುತ್ತೇನೆ” ಎಂಬ ಮಾತು ಈಗ ಫಲ ನೀಡಿದೆ. ಸ್ಟಾಲಿನ್ ಆಡಳಿತದ ಮೇಲಿದ್ದ ಅಸಮಾಧಾನ ಮತ್ತು ಯುವಜನತೆಯ ಅಪಾರ ಬೆಂಬಲ ವಿಜಯ್ ಅವರನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿದೆ. ವಿಶೇಷವೆಂದರೆ, ಮುಂದಿನ ದಿನಗಳಲ್ಲೂ ತಾವು ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಕೈಜೋಡಿಸುವುದಿಲ್ಲ ಎಂಬ ತಮ್ಮ ಹಠಕ್ಕೆ ವಿಜಯ್ ಈಗಲೂ ಬದ್ಧರಾಗಿದ್ದಾರೆ.

ವಿಜಯ್ ಮನೆಯಲ್ಲಿ ಈಗ ಹಬ್ಬದ ವಾತಾವರಣವಿದ್ದು, ಕುಟುಂಬದವರು ‘ವಿಸಲ್ ಪೋಡು’ ಹಾಡಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದ್ದಾರೆ. ಚೆನ್ನೈನ ಪಕ್ಷದ ಕಚೇರಿಯ ಮುಂಭಾಗ ಹಬ್ಬದ ಸಂಭ್ರಮ ಮನೆಮಾಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ದಳಪತಿ ದರ್ಬಾರ್‌ ಅನ್ನು ಸ್ವಾಗತಿಸುತ್ತಿದ್ದಾರೆ. ಒಟ್ಟಿನಲ್ಲಿ, ತಮಿಳುನಾಡು ರಾಜಕೀಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿರುವ ವಿಜಯ್, ಕಿಂಗ್ ಮೇಕರ್ ಆಗುವ ಬದಲು ತಾನೇ ಅಸಲಿ ಕಿಂಗ್ ಎಂದು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ‘ಹಿಮಂತ ಮ್ಯಾಜಿಕ್’: ಬಿಜೆಪಿ ಐತಿಹಾಸಿಕ ಹ್ಯಾಟ್ರಿಕ್ ಗೆಲುವು

Leave a Reply

Your email address will not be published. Required fields are marked *