ತುಮಕೂರು: ತುಮಕೂರಿನಲ್ಲಿ (Tumkuru) ನಡೆಯುತ್ತಿರುವ 24ನೇ ರಾಷ್ಟ್ರೀಯ ಕಿರಿಯರ (20 ವಯೋಮಿತಿ) ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷ ಹಾಗೂ ಮಹಿಳೆಯ 100 ಮೀಟರ್ ವಿಭಾಗದಲ್ಲಿ ಅಭಯ್ ಸಿಂಗ್ ಮತ್ತು ನಿಪಮ್ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.
ತುಮಕೂರು ಜಿಲ್ಲಾಡಳಿತ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಶುಕ್ರವಾರ ಜೂನಿಯರ್ ಪುರುಷರ 100 ಮೀಟರ್ ವಿಭಾಗದಲ್ಲಿ 10.41 ಸೆಕೆಂಡ್ನಲ್ಲಿ ಕ್ರಮಿಸಿದ ಅಭಯ್ ಸಿಂಗ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಯುವರಾಜ್ ಸಿಂಗ್ ಚಿಬ್ ಮತ್ತು ಅನ್ಶ ರಜಾಕ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.
ಜೂನಿಯರ್ ಮಹಿಳೆಯರ 100 ಮೀಟರ್ ವಿಭಾಗದಲ್ಲಿ ಉತ್ತರ ಪ್ರದೇಶದ ನಿಪಮ್ 11.53 ಸೆಕೆಂಡ್ನಲ್ಲಿ ಕ್ರಮಿಸಿ ಸ್ವರ್ಣ ಪದಕ ಗೆದ್ದುಕೊಂಡರು. ತಮಿಳುನಾಡಿದನ ಭಾವನ ಮತ್ತು ಗುಜರಾತ್ನ ಕಾಜಲ್ ಹೀರಾಭಾಯ್ ವಾಜಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ಪೋಲ್ ವಾಲ್ಟ್ ನಲ್ಲಿ 3.60 ಮೀ. ಜಿಗಿದ ತಮಿಳುನಾಡಿನ ಬಿ.ಸೌಂದರ್ಯ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದರು. ಮೊದಲ ದಿನ 6 ವಿಭಾಗದಲ್ಲಿ ಅಥ್ಲೀಟ್ಗಳು ಪದಕಗಳ ಬೇಟೆಯಾಡಿದರು.
ಫಲಿತಾಂಶ: ಪುರುಷರ ವಿಭಾಗ
100 ಮೀ., ಓಟ : 1. ಅಭಯ್ ಸಿಂಗ್ (10.41 ಸೆ.) – ರಿಲೆಯೆನ್ಸ್ , 2. ಯುವರಾಜ್ ಸಿಂಗ್ ಚಿಬ್ (10.523 ಸೆ.) – ಜಮ್ಮು ಮತ್ತು ಕಾಶ್ಮೀರ , 3. ಅನ್ಶು ರಜಾಕ್ (10.524 ಸೆ.) – ಉತ್ತರ ಪ್ರದೇಶ
5000 ಮೀ.: 1. ದಿನೇಶ್ (14:36.50 ಸೆ.) – ಉತ್ತರ ಪ್ರದೇಶ, 2. ರವಿ ಯಾದವ್ (14:37.25 ಸೆ.) – ಚಂಡೀಗಢ , 3. ಗುರುಪ್ರೀತ ಕಂಬೋಜ (14:37.29 ಸೆ.) – ಪಂಜಾಬ್
ಮಹಿಳೆಯರ ವಿಭಾಗ
100 ಮೀ., ಓಟ: 1. ನಿಪಮ್ (11.53 ಸೆ.) – ಉತ್ತರ ಪ್ರದೇಶ, 2. ಜಿ.ಭಾವನ (11.87 ಸೆ.) – ತಮಿಳುನಾಡು, 3. ಕಾಜಲ್ ಹೀರಾಭಾಯ್ ವಾಜಾ (11.88 ಸೆ.) – ಗುಜರಾತ್.
5000 ಮೀ.,: 1. ಮುಸ್ಕನ (16:42.88 ಸೆ.) – ಹರ್ಯಾಣ 2. ಸೋನಮ ಪರ್ಮರ (16:47.89 ಸೆ.) ಐಒಸಿಎಲ್, 3. ಸಾಕ್ಷಿ ಭಂಡಾರಿ (17:04.93 ಸೆ.) – ಮಹಾರಾಷ್ಟ್ರ.
ಡಿಸ್ಕಸ್ ಥ್ರೋ: 1. ಅಮನತ್ ಕಂಬೋಜ (52.27 ಮೀ.,)- ಪಂಜಾಬ್, 2. ರಿದ್ಧಿ, (48.92 ಮೀ.,) – ಹರ್ಯಾಣ, 3. ಸುಪ್ರಿಯಾ ಅಟ್ರಿ, (48.07 ಮೀ.,) – ಎನ್ಸಿಒಇ ಪಾಟಿಯಾಲ.
ಪೋಲ್ ವಾಲ್ಟ್ : 1. ಬಿ.ಸೌಂದರ್ಯ (3.60 ಮೀ.,) – ತಮಿಳುನಾಡು, 2. ಚುಕಿ ಬಿರ್ದಾ (3.40 ಮೀ., ) – ರಾಜಸ್ಥಾನ, 3. ಶ್ರುತಿ ರಾಥೋರ್ (3.40 ಮೀ.,) – ಮಧ್ಯಪ್ರದೇಶ
ಅಂ.ರಾ, ಮಟ್ಟದಲ್ಲಿ ತುಮಕೂರು ಗುರುತಿಸಿಕೊಳ್ಳುತ್ತಿದೆ: ತುಮಕೂರು ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ ಹಾಗೂ ಈಜುಕೊಳ ನಿರ್ಮಿಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಮೇ 3ರಿಂದ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿ ನಡೆಯುತ್ತದೆ. ಅಲ್ಲದೆ, ಇತ್ತೀಚೆಗೆ ನಡೆದ ಕರ್ನಾಟಕ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಆಯವ್ಯಯದಲ್ಲಿ ತುಮಕೂರು ಕ್ರೀಡೆಗೆ 3 ಕೋಟಿ ರೂ. ಈಗಾಗಲೇ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ತುಮಕೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಹೇಳಿದರು.
ತುಮಕೂರು ನಗರದಲ್ಲಿ ಈ ವಿಶೇಷ ಕ್ರೀಡಾ ವಾತಾವರಣ ನಿರ್ಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಅನುಕೂಲವಾಗಿದೆ. ಪ್ರತಿದಿನವೂ ಯುವ ಪ್ರತಿಭೆಗಳು ಮಹಾತ್ಮ ಗಾಂಧಿ, ಟೆನಿಸ್ ಕ್ರೀಡಾಂಗಣದಲ್ಲಿ ತರಬೇತಿ ನಡೆಸುತ್ತಿದ್ದಾರೆ. ಮುಂಬರುವ ಏಷ್ಯನ್, ಒಲಿಂಪಿಕ್ ಕ್ರೀಡಾಕೂಟಗಳನ್ನು ಪ್ರತಿನಿಧಿಸಲು ಕ್ರೀಡಾಪಟುಗಳು ಇಲ್ಲಿ ತಯಾರಾಗುತ್ತಿರುವುದು ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಮಕೂರು ಕೀರ್ತಿ ಹೆಚ್ಚಿಸಿದ ಅಥ್ಲೀಟ್ಗಳಾದ ಪ್ರಿಯಾ ಮೋಹನ್, ರೀತುಶ್ರೀ, ಎಂ.ಕೃಷಿಕ್ ಅವರಿಗೆ ಬಹುಮಾನ ಮೊತ್ತ ನೀಡಿ ಗೌರವಿಸಲಾಯಿತು.
ಶಾಸಕರಾದ ಬಿ. ಸುರೇಶ್ ಗೌಡ ಮತ್ತು ಜಿ.ಬಿ. ಜ್ಯೋತಿಗಣೇಶ್ ಸಹ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ಮಹಾನಗರಪಾಲಿಕೆ ಆಯುಕ್ತೆ ಶುಭ ಬಿ., ಕ್ರೀಡಾಕೂಟದ ನಿರ್ದೇಶಕ ಸತ್ಯನಾರಾಯಣ್ ಉಪಸ್ಥಿತರಿದ್ದರು.
