ಮುಂಬೈ: ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರ ವಿನೋದ್ ಕಾಂಬ್ಳೆ (Vinod Kambli) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸದ್ಯ ಅವರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ (Brain Clot) ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಪಾರ್ಶ್ವವಾಯು (Brain Stroke) ಸಂಭವಿಸುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಆತಂಕಕಾರಿ ವಿಷಯವನ್ನು ಅವರ ಆಪ್ತ ಗೆಳೆಯ ಮಾರ್ಕಸ್ ಕೌಟೊ ಬಹಿರಂಗಪಡಿಸಿದ್ದಾರೆ.
ಮರೆಯಾಗುತ್ತಿದೆ ನೆನಪಿನ ಶಕ್ತಿ: ಕಳೆದ ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಕಾಂಬ್ಳೆ ಅವರಿಗೆ ನೆನಪಿನ ಶಕ್ತಿ ಕುಂದುತ್ತಿದ್ದು, ದೇಹದ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಮುನ್ನೆಚ್ಚರಿಕೆ ವಹಿಸದ ಕಾರಣ, ಅವರ ಮೆದುಳಿನಲ್ಲಿರುವ ರಕ್ತದ ಹೆಪ್ಪುಗಟ್ಟುವಿಕೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಈಗ ಸಾಧ್ಯವಿಲ್ಲ ಎಂದು ನ್ಯೂರೋ ಸರ್ಜನ್ ಡಾ. ಆದಿಲ್ ಚಾಗ್ಲಾ ತಿಳಿಸಿದ್ದಾರೆ.
ಸಹಾಯಕ್ಕೆ ನಿಂತ ಕ್ರಿಕೆಟ್ ದಿಗ್ಗಜರು: ಕಾಂಬ್ಳೆ ಅವರ ಈ ದುಸ್ಥಿತಿ ಕಂಡು ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯನ ನೆರವಿಗೆ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಸೇರಿದಂತೆ ಅನೇಕ ಹಿರಿಯ ಕ್ರಿಕೆಟಿಗರು ಧಾವಿಸಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ವಾಟ್ಸಾಪ್ ಗ್ರೂಪ್ ಒಂದರ ಮೂಲಕ ಕಾಂಬ್ಲಿ ಅವರ ವೈದ್ಯಕೀಯ ವೆಚ್ಚಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಕಾಂಬ್ಳೆ ಅವರಿಗೆ ಕೇವಲ ವ್ಯಸನಮುಕ್ತ ಕೇಂದ್ರದ ಅಗತ್ಯವಿಲ್ಲ, ಬದಲಿಗೆ ಅತ್ಯಾಧುನಿಕ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಅವರ ಆಪ್ತರು ಹೇಳಿದ್ದಾರೆ.
ಬದುಕು ಕಟ್ಟಿಕೊಳ್ಳುವ ಹಂಬಲ: ಕಾಂಬ್ಳೆ ಸದ್ಯ ಮದ್ಯಪಾನವನ್ನು ಬಿಟ್ಟಿದ್ದರೂ, ಧೂಮಪಾನದ ಚಟದಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ದಾರಿಯಲ್ಲಿ ಹೋಗುವವರು ಇವರು ಮಾಜಿ ಕ್ರಿಕೆಟಿಗ ಎಂಬ ಪ್ರೀತಿಯಿಂದ ಸಿಗರೇಟ್ ನೀಡುತ್ತಿರುವುದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಇತ್ತೀಚೆಗೆ ಐಸ್ ಕ್ರೀಮ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ನಟಿಸಿರುವ ಕಾಂಬ್ಳೆ, ತಮ್ಮ ಇಚ್ಛಾಶಕ್ತಿಯಿಂದ ಮತ್ತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹಾಕಿ ತಂಡಕ್ಕೆ ಆಯ್ಕೆಯಾದ ಮಡಿಕೇರಿ ವಿದ್ಯಾರ್ಥಿನಿಯರು
