TOP NEWS

Peddi Film: ‘ಪೆದ್ದಿ’ ಚಿತ್ರದ ಜಾನ್ವಿ ಕಪೂರ್ ಅವರ ವಿವಾದಾತ್ಮಕ ದೃಶ್ಯಗಳು ಅಧಿಕೃತವಾಗಿ ಔಟ್: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಬುಚ್ಚಿ ಬಾಬು ಸನಾ!

Peddi film Janhvi kapoor controversial scene deleted Buchi Babu says people misread them

ನವದೆಹಲಿ: ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಪೆದ್ದಿ’ (Peddi Film) ಸಿನಿಮಾ ಇತ್ತೀಚೆಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಆದರೆ, ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ (ಅಚ್ಚಿಯಮ್ಮ) ಅವರ ಪಾತ್ರವನ್ನು ಬಿಂಬಿಸಿರುವ ರೀತಿಗೆ ಪ್ರೇಕ್ಷಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಜಾನ್ವಿ ಪಾತ್ರವನ್ನು ಕೇವಲ ಗ್ಲಾಮರ್ ಪ್ರದರ್ಶನಕ್ಕೆ ಹಾಗೂ ವಿಕೃತವಾಗಿ ಬಳಸಿಕೊಳ್ಳಲಾಗಿದೆ (ಅಬ್ಜೆಕ್ಟಿಫಿಕೇಷನ್) ಎಂದು ಸಿನಿಪ್ರೇಕ್ಷಕರು ಚಿತ್ರತಂಡದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಿಡಿಕಾರಿದ್ದರು. ಈ ತೀವ್ರ ವಿರೋಧದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ, ಪ್ರೇಕ್ಷಕರ ಭಾವನೆಗಳಿಗೆ ಗೌರವ ನೀಡಿ ಚಿತ್ರದಲ್ಲಿದ್ದ ಕೆಲವು ಮುಜುಗರದ ದೃಶ್ಯಗಳನ್ನು ಕತ್ತರಿಸಿ ತೆಗೆದುಹಾಕಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

ಸಿನಿಮಾದಿಂದ ದೃಶ್ಯ ತೆಗೆದ ನಿರ್ದೇಶಕ

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ದೇಶಕ ಬುಚ್ಚಿ ಬಾಬು ಸನಾ, ಸಿನಿಮಾದಲ್ಲಿ ನಾಯಕನ ಪಾತ್ರವು ಕಾಡಿನಿಂದ ದೂರವಿರುವ ಒಂದು ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದಿರುತ್ತದೆ. ಆತನ ರಗಡ್ ವ್ಯಕ್ತಿತ್ವವನ್ನು ನೈಜವಾಗಿ ತೋರಿಸಲು ನಾನು ಸ್ವಲ್ಪ ಕಠಿಣವಾದ ಹಾದಿ ಹಿಡಿದಿದ್ದೆ. ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಬೇಕು ಎಂದು ಹಠ ಹಿಡಿಯುವ ಆತನ ಹಿನ್ನೆಲೆ ಹಾಗೂ ಬೆಳೆದ ವಾತಾವರಣವನ್ನು ಸಿನಿಮಾದ ಕೊನೆಯಲ್ಲಿ ಸರಿಪಡಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಕೆಲವು ದೃಶ್ಯಗಳು ಪ್ರೇಕ್ಷಕರಿಗೆ ತಪ್ಪು ಸಂದೇಶ ರವಾನಿಸುವಂತೆ (ಮಿಸ್‌ಲೀಡಿಂಗ್) ಮೂಡಿಬಂದಿದ್ದು ನಿಜ. ಪ್ರೇಕ್ಷಕರಿಂದ ನೆಗೆಟಿವ್ ಫೀಡ್‌ಬ್ಯಾಕ್ ಬಂದ ತಕ್ಷಣವೇ ನಾವು ತಪ್ಪು ತಿದ್ದಿಕೊಂಡಿದ್ದು, ಆ ಎಲ್ಲಾ ವಿವಾದಾತ್ಮಕ ದೃಶ್ಯಗಳನ್ನು ಸಿನಿಮಾದಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಲನಚಿತ್ರಗಳು ಜನರನ್ನು ರಂಜಿಸುವುದರ ಜೊತೆಗೆ ಪ್ರೇರೇಪಿಸಬೇಕೇ ಹೊರತು ಯಾರಿಗೂ ಅಸಹನೀಯ ಭಾವನೆ ಉಂಟುಮಾಡಬಾರದು. ತೆರೆಮೇಲೆ ಮತ್ತು ನಿಜಜೀವನದಲ್ಲೂ ನನಗೆ ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವವಿದೆ. ಯಾವುದೇ ಪಾತ್ರವನ್ನು ಕೀಳಾಗಿ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಪ್ರೇಕ್ಷಕರು ಎತ್ತಿರುವ ಆಕ್ಷೇಪಗಳನ್ನು ನಾವು ಗೌರವಿಸುತ್ತೇವೆ ಹಾಗೂ ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇಂಟರ್ನೆಟ್‌ನಲ್ಲಿ ಈ ಸಿನಿಮಾದ ಕಥೆಗಿಂತ ಹೆಚ್ಚಾಗಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಬರೆದಿರುವ ಶೈಲಿಯ ಬಗ್ಗೆಯೇ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಚಿತ್ರಕಥೆಗೆ ಆಕೆಯ ಪಾತ್ರದಿಂದ ಯಾವುದೇ ಹೆಚ್ಚಿನ ಮೌಲ್ಯ ಸಿಕ್ಕಿಲ್ಲ, ಬದಲಿಗೆ ನಾಯಕನ ಆಸೆಯ ವಸ್ತುವಿನಂತೆ ಮಾತ್ರ ಆಕೆಯನ್ನು ಬಿಂಬಿಸಲಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

ಇದೇ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರದ ನೈಜ ಸ್ಫೂರ್ತಿಯ ಬಗ್ಗೆ ಹಂಚಿಕೊಂಡಿರುವ ನಿರ್ದೇಶಕರು, ಉಪ್ಪಾಡ ಕರಾವಳಿಯಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಈಜುತ್ತಿದ್ದ ಸಾಮಾನ್ಯ ಮೀನುಗಾರನೊಬ್ಬನನ್ನು ನೋಡಿ ನನಗೆ ಈ ಕಥೆಯ ಆಲೋಚನೆ ಬಂತು. ಇಂತಹ ಪ್ರತಿಭೆಗಳು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆಲ್ಲುವ ಶಕ್ತಿ ಹೊಂದಿರುತ್ತಾರೆ. 2017-18 ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ‘ಖೇಲೋ ಇಂಡಿಯಾ’ ಯೋಜನೆ ನಮಗೆ ಮುಖ್ಯ ಪ್ರೇರಣೆಯಾಯಿತು. ಇದೊಂದು ಕೇವಲ ಫೈಟ್, ಐದು ಹಾಡುಗಳಿರುವ ಸಾಂಪ್ರದಾಯಿಕ ಕಮರ್ಷಿಯಲ್ ಸಿನಿಮಾವಲ್ಲ. ಇದೊಂದು ಕ್ರೀಡಾಪಟುವಿನ ಸ್ಪೂರ್ತಿದಾಯಕ ಜರ್ನಿಯಾಗಿದ್ದು, ನಟ ರಾಮ್ ಚರಣ್ ಅವರಿಗೂ ಇಂತಹದ್ದೇ ಒಂದು ಒಳ್ಳೆಯ ಕಥೆ ಹೇಳಬೇಕು ಎಂಬ ಆಸೆಯಿದ್ದಿದ್ದರಿಂದ ನಾವಿಬ್ಬರು ಜೊತೆಯಾಗಿ ಈ ಸಿನಿಮಾ ಮಾಡಿದೆವು ಎಂದು ಹೇಳಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಜೊತೆಗೆ ವಿಜಯ್ ಸೇತುಪತಿ, ಬೋಮನ್ ಇರಾನಿ, ದಿವ್ಯೇಂದು ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 13ನೇ ಸೀಸನ್‌ಗೆ ಕಾಮನ್ ಮ್ಯಾನ್ ಎಂಟ್ರಿ: ಆಡಿಷನ್ ರೂಲ್ಸ್‌ ಮರೆಯಬೇಡಿ

Leave a Reply

Your email address will not be published. Required fields are marked *