ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಸಾರಿಗೆ ವೆಚ್ಚದ ಭಾರಿ ಆಘಾತ (Bus Fare) ಎದುರಾಗಿದೆ. ಒಂದು ಕಡೆ ರಾಜ್ಯದ ಸರ್ಕಾರಿ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರೆ, ಇನ್ನೊಂದೆಡೆ ಖಾಸಗಿ ಬಸ್ ಮಾಲೀಕರ ಒಕ್ಕೂಟವು ಈಗಾಗಲೇ ಪ್ರಯಾಣ ದರವನ್ನು ಅಧಿಕೃತವಾಗಿ ಹೆಚ್ಚಿಸಿ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಡಿಸೇಲ್ ದರ ಏರಿಕೆ ಕಾರಣ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳು ದರ ಪರಿಷ್ಕರಣೆಗೆ ಅಧಿಕೃತ ಮನವಿ ಸಲ್ಲಿಸಿವೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಗಣನೀಯವಾಗಿ ಹೆಚ್ಚಿರುವುದು ಹಾಗೂ ಸಿಬ್ಬಂದಿಗಳ ವೇತನ ಬಾಕಿ ಸೇರಿದಂತೆ ಸುಮಾರು 1,271 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ನಿಗಮಗಳು ಹೇಳಿವೆ. ಕಳೆದ 2025ರ ಜನವರಿಯಲ್ಲಷ್ಟೇ ದರ ಏರಿಕೆ ಮಾಡಲಾಗಿದ್ದರೂ, ನಷ್ಟದಿಂದ ಮುಕ್ತಿ ಪಡೆಯಲು ಈಗ ಮತ್ತೆ ದರ ಹೆಚ್ಚಳ ಅನಿವಾರ್ಯ ಎಂಬುದು ನಿಗಮಗಳ ವಾದವಾಗಿದೆ.
ಡಿಸೇಲ್ ಬೆಲೆ ಗಾಬರಿ ಹುಟ್ಟಿಸುತ್ತೆ ಎಂದ ಸಿಎಂ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಿ ಡಿಪೋಗಳಲ್ಲಿ ಸಿಗುವ ಸಗಟು ಡೀಸೆಲ್ ದರಕ್ಕೂ ಮತ್ತು ಸಾರ್ವಜನಿಕ ಬಂಕ್‌ಗಳ ಖಾಸಗಿ ಡೀಸೆಲ್ ಬೆಲೆಗೂ ಬರೋಬ್ಬರಿ 40 ರೂಪಾಯಿಗಳ ಭಾರಿ ವ್ಯತ್ಯಾಸವಿರುವುದು ಗಾಬರಿ ಹುಟ್ಟಿಸುವಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಬದುಕಿಸುವುದು ಎಷ್ಟು ಮುಖ್ಯವೋ, ಜನಸಾಮಾನ್ಯರ ಜಿಸೆಗೆ ಕತ್ತರಿ ಬೀಳದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯವಾಗಿರುವುದರಿಂದ, ಎರಡು ಕಡೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಸಮತೋಲಿತ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಸರ್ಕಾರಿ ಬಸ್‌ಗಳ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ರಾಜ್ಯದ ಖಾಸಗಿ ಬಸ್ ಮಾಲೀಕರ ಒಕ್ಕೂಟವು ಜೂನ್ 9 ರಿಂದಲೇ ಅನ್ವಯವಾಗುವಂತೆ ಟಿಕೆಟ್ ದರವನ್ನು ಶೇಕಡಾ 5 ರಿಂದ 8 ರಷ್ಟು ಹೆಚ್ಚಿಸಿದೆ. ಇಂಧನ ಬೆಲೆ ಏರಿಕೆ, ಟೋಲ್ ಗೇಟ್‌ಗಳ ಶುಲ್ಕ ಹೆಚ್ಚಳ ಹಾಗೂ ವಾಹನಗಳ ಬಿಡಿಭಾಗಗಳ ದರ ದುಬಾರಿಯಾಗಿರುವುದರಿಂದ ಬಸ್‌ಗಳ ನಿರ್ವಹಣೆ ಹೊರೆಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಒಕ್ಕೂಟ ಸಮರ್ಥಿಸಿಕೊಂಡಿದೆ. ಈ ಪರಿಷ್ಕರಣೆಯಿಂದಾಗಿ ಉದಾಹರಣೆಗೆ ಮಂಗಳೂರು-ಉಡುಪಿ ನಡುವಿನ ಸಂಚಾರ ದರ ನೂರು ರೂಪಾಯಿಗೆ ತಲುಪಿದ್ದು, ನಿತ್ಯ ಪ್ರಯಾಣಿಸುವ ಉದ್ಯೋಗಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ.
