TOP NEWS

Vijay: ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಆ ಹುಡುಗ ಇಂದು ಡಿಎಂಕೆ ಕೋಟೆ ಧೂಳೀಪಟ ಮಾಡಿದ ‘ಜನನಾಯಕ’!

director RGV post about old photo of vijay with karunanidhi

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ದೇಶವೇ ಬೆರಗಾಗಿದೆ. ದಶಕಗಳಿಂದ ರಾಜ್ಯವನ್ನು ಆಳುತ್ತಿದ್ದ ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನೇ ಸೋಲಿಸಿ ವಿಜಯ್ ಈಗ ಸಿಎಂ ಪಟ್ಟ ಅಲಂಕರಿಸಲು ಸಜ್ಜಾಗಿದ್ದಾರೆ. ಈ ಅಭೂತಪೂರ್ವ ಬದಲಾವಣೆಯ ನಡುವೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಹಂಚಿಕೊಂಡಿರುವ ವಿಜಯ್‌ ಅವರ (Vijay) ಒಂದು ಪೋಟೋ ಮತ್ತು ಅದರ ಕ್ಯಾಪ್ಷನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಆರ್​ಜಿವಿ ಹಂಚಿಕೊಂಡ ಆ ರೋಚಕ ಪೋಟೋ: ರಾಮ್ ಗೋಪಾಲ್ ವರ್ಮಾ ಅವರು ಡಿಎಂಕೆ ಸಾರಥಿಯಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರ ಜೊತೆಗಿನ ವಿಜಯ್ ಅವರ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರುಣಾನಿಧಿ ಅವರು ಕಾರ್ಯಕ್ರಮವೊಂದನ್ನು ಉದ್ಘಾಟಿಸುತ್ತಿದ್ದರೆ, ಅವರ ಹಿಂದೆ ವಿಜಯ್ ಸಾಮಾನ್ಯನಂತೆ ನಿಂತಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ಆರ್​ಜಿವಿ, “ತಮ್ಮ ಹಿಂದೆ ನಿಂತಿರುವ ಈ ಹುಡುಗ ಒಂದು ದಿನ ತನ್ನ ಪಕ್ಷವನ್ನೇ ಬೇರುಸಹಿತ ಕಿತ್ತೊಗೆಯುತ್ತಾನೆ ಎಂದು ಕರುಣಾನಿಧಿ ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ” ಎಂದು ಬರೆದುಕೊಂಡಿದ್ದಾರೆ. ಕಾಲಚಕ್ರ ಉರುಳಿದಂತೆ ಅಂದು ನಾಯಕರ ಹಿಂದೆ ನಿಂತಿದ್ದ ವ್ಯಕ್ತಿಯೇ ಇಂದು ತಮಿಳುನಾಡಿನ ಸರ್ವೋಚ್ಚ ನಾಯಕನಾಗಿ ಬೆಳೆದಿರುವುದನ್ನು ಆರ್​ಜಿವಿ ಮಾರ್ಮಿಕವಾಗಿ ನೆನಪಿಸಿದ್ದಾರೆ.

ಮೂರು ದಶಕದ ಸಿನಿಮಾ ಪಯಣಕ್ಕೆ ರಾಜಕೀಯ ಅಂತ್ಯ: 1992ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಜಯ್, ಸುಮಾರು 34 ವರ್ಷಗಳ ಕಾಲ ಚಿತ್ರರಂಗದಲ್ಲಿ ಅಧಿಪತಿ ಎನಿಸಿಕೊಂಡಿದ್ದರು. 2024ರಲ್ಲಿ ರಾಜಕೀಯ ಪಕ್ಷ ಘೋಷಿಸಿ, ಕೇವಲ ಎರಡೇ ವರ್ಷಗಳಲ್ಲಿ ಅಧಿಕಾರದ ಗದ್ದುಗೆ ಏರುತ್ತಿರುವುದು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ದಾಖಲೆ. ಸದ್ಯ ಅವರ ಕೊನೆಯ ಚಿತ್ರ ‘ಜನನಾಯಕನ್’ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾ ಮಂದಿರಗಳಲ್ಲೂ ವಿಜಯ್ ಹವಾ ಮುಂದುವರಿಯುವ ಲಕ್ಷಣಗಳಿವೆ.

ಸಾಮಾನ್ಯ ನಟನಾಗಿ ಶುರುವಾಗಿ, ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ವಿಜಯ್ ಅವರ ಈ ಸುದೀರ್ಘ ಪಯಣ ಈಗ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಇದನ್ನೂ ಓದಿ: ಕೇವಲ ಒಂದು ಮತದ ಅಂತರದಿಂದ ಸಚಿವರ ಸೋಲು: ತಿರುಪ್ಪತ್ತೂರಿನಲ್ಲಿ ‘ದೈತ್ಯ ಸಂಹಾರ’ ಮಾಡಿದ ವಿಜಯ್ ಪಕ್ಷದ ಅಭ್ಯರ್ಥಿ!

Leave a Reply

Your email address will not be published. Required fields are marked *