ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 106 ಸ್ಥಾನಗಳನ್ನು ಗೆಲ್ಲುವ ಮೂಲಕ ‘ದಳಪತಿ’ ವಿಜಯ್ (Vijay) ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಅದ್ಭುತ (Jana Nayagan) ಸಾಧನೆ ಮಾಡಿದೆ. ಈ ಭರ್ಜರಿ ಮುನ್ನಡೆಯೊಂದಿಗೆ ವಿಜಯ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಈಗ ನಿಶ್ಚಿತವಾಗಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ರಾಜಕೀಯ ಸಂಭ್ರಮದ ನಡುವೆಯೇ, ಅವರ ಚಿತ್ರರಂಗದ ಕೊನೆಯ ಸಿನಿಮಾ ಎನ್ನಲಾದ ‘ಜನನಾಯಗನ್’ (Jana Nayagan) ಬಿಡುಗಡೆಯ ಕುರಿತು ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಅಧಿಕಾರ ಸ್ವೀಕಾರದ ನಂತರ ಚಿತ್ರ ಬಿಡುಗಡೆ: ಚುನಾವಣಾ ಬಿಡುವಿನ ಕಾರಣದಿಂದಾಗಿ ‘ಜನನಾಯಗನ್’ ಸಿನಿಮಾದ ಬಿಡುಗಡೆ ತಡವಾಗಿತ್ತು. ಈಗ ವಿಜಯ್ ಸಿಎಂ ಪಟ್ಟ ಅಲಂಕರಿಸುವುದು ಖಚಿತವಾಗಿರುವುದರಿಂದ, ಅವರು ಅಧಿಕಾರ ಸ್ವೀಕರಿಸಿದ ಬಳಿಕವೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಓರ್ವ ನಟ ರಾಜ್ಯದ ಉನ್ನತ ಅಧಿಕಾರದಲ್ಲಿರುವಾಗಲೇ ಅವರ ಅಭಿನಯದ ಸಿನಿಮಾ ರಿಲೀಸ್ ಆಗುತ್ತಿರುವುದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವಾಗಲಿದೆ.
ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್‌ಗೆ ವಿಶೇಷ ಗೌರವ: ಈ ಚಿತ್ರವನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸುತ್ತಿದೆ. ಈಗಾಗಲೇ ಇವರ ನಿರ್ಮಾಣದ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ, ತಾವು ನಿರ್ಮಿಸಿದ ಸಿನಿಮಾದ ನಾಯಕನೇ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ಸಂಸ್ಥೆಯ ಹೆಮ್ಮೆಯನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ವಿಜಯ್ ಅವರ ರಾಜಕೀಯ ಸಿದ್ಧಾಂತ ಹಾಗೂ ಆಶಯಗಳನ್ನು ತೆರೆಯ ಮೇಲೆ ಕಾಣಬಹುದು ಎಂದು ಹೇಳಲಾಗುತ್ತಿದೆ.
ಜೂನ್ 4ಕ್ಕೆ ಭರ್ಜರಿ ಎಂಟ್ರಿ? ಮೂಲಗಳ ಮಾಹಿತಿ ಪ್ರಕಾರ, ಜೂನ್ 4ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣುವ ಸಾಧ್ಯತೆಯಿದೆ. ವಾಸ್ತವವಾಗಿ ಈ ದಿನಾಂಕದಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಬೇಕಿತ್ತು, ಆದರೆ ಅದು ಮುಂದೂಡಲ್ಪಟ್ಟಿರುವುದರಿಂದ ಆ ಸ್ಲಾಟ್ ಅನ್ನು ‘ಜನನಾಯಗನ್’ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಮುಖ್ಯಮಂತ್ರಿಯಾಗಿ ವಿಜಯ್ ಅವರು ಹೊಸ ಇನಿಂಗ್ಸ್ ಆರಂಭಿಸಿದ ನಂತರ ಬಿಡುಗಡೆಯಾಗಲಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆಯಿದೆ.
ದೃಶ್ಯ ಸೋರಿಕೆ ಮತ್ತು ಅಭಿಮಾನಿಗಳ ಆಕ್ರೋಶ: ಇನ್ನು ಇತ್ತೀಚೆಗೆ ಈ ಸಿನಿಮಾದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಲವು ಟೀಕಾಕಾರರು ಈ ಲೀಕ್ ಹಿಂದೆ ವಿಜಯ್ ಅವರದ್ದೇ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ವಿಜಯ್ ಅಭಿಮಾನಿಗಳು, ಗೆಲುವಿನ ಅಬ್ಬರವನ್ನು ಸಹಿಸಲಾಗದವರು ಇಂತಹ ವದಂತಿ ಹಬ್ಬಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
