ಕೋಯಮತ್ತೂರು: ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಸುಲೂರು ಸಮೀಪದ ಕಣ್ಣಂಪಾಳಯಂ ಕೆರೆಯ ಬಳಿ 10 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ (Crime) ಪತ್ತೆಯಾಗಿರುವ ಭೀಕರ ಘಟನೆ ಇಡೀ ರಾಜ್ಯವನ್ನು ನಡುಗಿಸಿದೆ. ಗುರುವಾರ ಸಂಜೆ ಮನೆಯ ಬಳಿ ಕಿರಾಣಿ ಸಾಮಗ್ರಿ ಖರೀದಿಸಲು ಹೊರಟಿದ್ದ ಬಾಲಕಿಯನ್ನು ಅಪಹರಿಸಿ, ಬಳಿಕ ಹತ್ಯೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಮತ್ತು ಮೋಹನ್ ರಾಜ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಬಾಲಕಿಯ ಪೋಷಕರು ಮತ್ತು ನೂರಾರು ಸಾರ್ವಜನಿಕರು ಸುಲೂರು ಪೊಲೀಸ್ ಠಾಣೆಯ ಮುಂದೆ ಹಾಗೂ ರಸ್ತೆ ತಡೆ ನಡೆಸಿ ಕಠಿಣ ನ್ಯಾಯಕ್ಕಾಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿಯ ಸಾವಿನ ಸುತ್ತ ನಡೆದಿರುವ ನಿಖರ ಘಟನಾಾವಳಿಗಳ ಬಗ್ಗೆ ತಮಗಿನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಗರಂ
ಈ ಭೀಕರ ಘಟನೆಯು ತಮಿಳುನಾಡಿನ ಹೊಸ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳಲು ದೊಡ್ಡ ಅಸ್ತ್ರವಾಗಿದೆ. ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ೧೨ ದಿನಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಪ್ರತಿಪಕ್ಷ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿಗಳು ಖುದ್ದಾಗಿ ಹೇಳಿಕೆ ನೀಡುವವರೆಗೂ ಶವವನ್ನು ಪಡೆಯುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, ಕೋಯಮತ್ತೂರಿನಲ್ಲಿ ಬಾಲಕಿಗೆ ನಡೆದಿರುವ ಘಟನೆ ತೀವ್ರ ಆಘಾತ ಮತ್ತು ಸdisturbance ಉಂಟುಮಾಡಿದೆ. ಇಂತಹ ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂದೀಪ್ ರೈ ರಾಥೋಡ್ ಅವರು ತನಿಖೆಯ ಉಸ್ತುವಾರಿಗಾಗಿ ಖುದ್ದಾಗಿ ಕೋಯಮತ್ತೂರಿಗೆ ಧಾವಿಸಿದ್ದಾರೆ.
கோயம்புத்தூரில் நேற்று 10 வயது சிறுமிக்கு நிகழ்ந்த கொடூர சம்பவம் மிகுந்த வேதனையையும், அதிர்ச்சியையும் அளிக்கிறது. இத்தகைய மனிதநேயமற்ற மற்றும் மன்னிக்க முடியாத குற்றச் செயல்கள் நமது சமூகத்தில் ஒருபோதும் ஏற்றுக்கொள்ளப்பட முடியாது.
— CMOTamilNadu (@CMOTamilnadu) May 23, 2026
தங்கள் உயிருக்குயிரான குழந்தையைப் பிரிந்து வாடும்…
ಇದೇ ವೇಳೆ ಆಡಳಿತ ಪಕ್ಷದ ಸಚಿವರು ಮತ್ತು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರಾಜ್ಯ ಸಚಿವ ಎಂ.ಎಸ್. ಸಂಪತ್ ಮತ್ತು ಸುಲೂರು ಕ್ಷೇತ್ರದ ನೂತನ ಟಿವಿಕೆ ಶಾಸಕ ಎನ್.ಎಂ. ಸುಕುಮಾರ್ ಅವರು ಇಎಸ್ಐ ಆಸ್ಪತ್ರೆಯಲ್ಲಿ ಪೋಷಕರನ್ನು ಭೇಟಿ ಮಾಡಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ಖಚಿತಪಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಘಟನೆಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿರುವ ಪ್ರತಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ 12 ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಗಾಂಜಾ ಕಳ್ಳಸಾಗಣೆ, ರೌಡಿಸಂ ಸೇರಿದಂತೆ 30 ಕ್ಕೂ ಹೆಚ್ಚು ಪ್ರಮುಖ ಅಪರಾಧ ಘಟನೆಗಳು ನಡೆದಿವೆ. ಬಾಲಕಿಯ ಅಪಹರಣ ಮತ್ತು ಕೊಲೆ ಪ್ರಕರಣವು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸಿದೆ ಎಂದು ಆರೋಪಿಸಿದ್ದಾರೆ. ಮಹಿಳೆಯರ ರಕ್ಷಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ವಿಜಯ್ ಸರ್ಕಾರದಲ್ಲಿ ಮಹಿಳೆಯರ ಭದ್ರತೆ ಎಲ್ಲಿದೆ ಎಂದು ಡಿಎಂಕೆ ವಕ್ತಾರ ಶರವಣನ್ ಅಣ್ಣಾದುರೈ ಪ್ರಶ್ನಿಸಿದ್ದಾರೆ.
ಆದಾಗ್ಯೂ, ಈ ರಾಜಕೀಯ ಕೆಸರೆರಚಾಟದ ಮಧ್ಯೆ ಡಿಎಂಕೆ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕ ನಾರಾಯಣನ್ ತಿರುಪತಿ, ತಮಿಳುನಾಡಿನಲ್ಲಿ ಸರ್ಕಾರಗಳು ಬದಲಾದರೂ ಇಂತಹ ಘೋರ ಅಪರಾಧಗಳು ನಿಲ್ಲದಿರಲು ಈ ಹಿಂದಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. ಡಿಎಂಕೆ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಹೋಗಿತ್ತು, ಅದರ ದುಷ್ಪರಿಣಾಮವನ್ನು ರಾಜ್ಯ ಈಗಲೂ ಅನುಭವಿಸುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸ್ಪೀಡ್ ಬ್ರೇಕರ್ ಗಮನಿಸದೇ ಬೈಕ್ ಸವಾರನ ಅತಿವೇಗ: ಹಿಂಬದಿ ಸವಾರ ರಸ್ತೆಗೆ ಬಿದ್ದು ಬೆನ್ನೆಲುಬು ಮುರಿತ
