ನವದೆಹಲಿ: ಕಳೆದ 11 ವರ್ಷಗಳಲ್ಲಿ ದೇಶದ ಪರಮಾಣು ಇಂಧನ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದ್ದು, 2032ರ ವೇಳೆಗೆ ಮೂರು ಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ಅಣುಶಕ್ತಿ, ಬಾಹ್ಯಾಕಾಶ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ರಾಜ್ಯಸಭೆಗೆ ತಿಳಿಸಿದ್ದಾರೆ.
ಪರಮಾಣು ರಿಯಾಕ್ಟರ್ ಸಾಮರ್ಥ್ಯ ಹೆಚ್ಚು
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, 2014ರಲ್ಲಿ ದೇಶದ ಪರಮಾಣು ರಿಯಾಕ್ಟರ್ ಸಾಮರ್ಥ್ಯ 4 ಸಾವಿರದ 780 ಮೆಗಾವ್ಯಾಟ್ ನಷ್ಟಿದ್ದು, ಇದೀಗ 8 ಸಾವಿರದ 780 ಮೆಗಾವ್ಯಾಟ್ ತಲುಪಿದೆ. ಅಣು ಇಂಧನದಲ್ಲಿ ರಾಷ್ಟ್ರ ಆತ್ಮನಿರ್ಭರತೆಯತ್ತ ಸಾಗುತ್ತಿದೆ ಎಂದರು. ನಂತರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, 370ನೇ ವಿಧಿ ರದ್ದು ಪಡಿಸಿದ ನಂತರ ಜಮ್ಮು -ಕಾಶ್ಮೀರದಲ್ಲಿ ಪರಿಸ್ಧಿತಿ ಸಾಕಷ್ಟು ಸುಧಾರಣೆಯಾಗಿದ್ದು, ಉದ್ಯೋಗ ಸೃಷ್ಟಿ ಹೆಚ್ಚಾಗಿದೆ ಎಂದರು.
ಸಚಿವರು ಹೇಳಿದ್ದೇನು?
ದೇಶಾದ್ಯಂತ ಕಾರ್ಮಿಕರ ಭವಿಷ್ಯ ನಿಧಿ-ಇಪಿಎಫ್ ಗೆ ಕಳೆದ 7 ವರ್ಷಗಳಲ್ಲಿ 8 ಕೋಟಿ 35 ಲಕ್ಷ ಹೊಸ ನೋಂದಣಿಯಾಗಿದ್ದು, ಇದರಲ್ಲಿ ಜಮ್ಮು-ಕಾಶ್ಮೀರದ ಒಂದು ಲಕ್ಷ 60 ಸಾವಿರದ ಕಾರ್ಮಿಕರು ನೂತನವಾಗಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ದೂರಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೇಶದ ಬಹುತೇಕ ಭಾಗಗಳಿಗೆ ಅತಿವೇಗದ ಅಂತರ್ಜಾಲ ಸೇವೆ ಒದಗಿಸಲಾಗಿದ್ದು, ಜಗತ್ತಿನಲ್ಲೇ ಬೃಹತ್ ಸಂಪರ್ಕ ಯೋಜನೆ ಭಾರತದಲ್ಲಿ ಜಾರಿಗೊಳ್ಳುತ್ತಿರುವುದು ಮಹತ್ವದ ಸಂಗತಿ ಎಂದರು. ಪ್ರಸ್ತುತ 2 ಲಕ್ಷ 14 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.
ಇದನ್ನೂ ಓದಿ: ಸೈಬರ್ ಸುರಕ್ಷತೆಗೆ ಕೇಂದ್ರ ಸರ್ಕಾರ ಒತ್ತು, ಗೃಹ ಸಚಿವ ಅಮಿತ್ ಶಾ
