ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ತಾರಕಕ್ಕೇರಿರುವ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಚಿತ್ರರಂಗ ಮತ್ತು ರಾಜಕೀಯ ವಲಯದಿಂದ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಸಂಖ್ಯಾಬಲದ ಆಧಾರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ವಿಜಯ್ ಅವರಿಗೆ ಅವಕಾಶ ನೀಡದ ರಾಜ್ಯಪಾಲರ ನಿಲುವಿನ ವಿರುದ್ಧ ದಿಗ್ಗಜರು ಧ್ವನಿ ಎತ್ತಿದ್ದಾರೆ.
ಖುಷ್ಬೂ ಸುಂದರ್ ಬಹಿರಂಗ ಬೆಂಬಲ: ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಖುಷ್ಬೂ ಸುಂದರ್ ಅವರು ವಿಜಯ್ ಪರವಾಗಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. “ರಾಜ್ಯದ ಒಬ್ಬ ಪ್ರಜೆಯಾಗಿ ನಾನು ಗಮನಿಸುತ್ತಿರುವುದು ಏನೆಂದರೆ, ತಮಿಳುನಾಡಿನ ಜನರು ತಮ್ಮ ಮುಂದಿನ ಮುಖ್ಯಮಂತ್ರಿಯನ್ನು ಈಗಾಗಲೇ ಆರಿಸಿಕೊಂಡಿದ್ದಾರೆ. ಜನರೇ ತಮ್ಮ ನಾಯಕನನ್ನು ಆ ಸ್ಥಾನದಲ್ಲಿ ನೋಡಲು ಬಯಸುತ್ತಿರುವಾಗ, ಅವರೇ ರಾಜ್ಯವನ್ನು ಮುನ್ನಡೆಸಬೇಕು” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜನಾದೇಶಕ್ಕೆ ಗೌರವ ನೀಡಲಿ ಎಂದ ಕಮಲ್ ಹಾಸನ್: ರಾಜ್ಯಪಾಲರ ನಡೆಯನ್ನು ಕಟುವಾಗಿ ಟೀಕಿಸಿರುವ ನಟ ಕಮಲ್ ಹಾಸನ್, 108 ಸ್ಥಾನಗಳನ್ನು ಗೆದ್ದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಕಿಡಿಕಾರಿದ್ದಾರೆ. “ತಮಿಳುನಾಡಿನ ಇತಿಹಾಸದಲ್ಲಿ ಇಂತಹ ನಿರ್ಧಾರ ಹಿಂದೆಂದೂ ಬಂದಿರಲಿಲ್ಲ. ವಿಜಯ್ ಅವರಿಗೆ ಅವಕಾಶ ನಿರಾಕರಿಸುವುದು ಜನರ ತೀರ್ಪನ್ನು ಅವಮಾನಿಸಿದಂತೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಪ್ರತಿಪಕ್ಷವಾಗಿ ಕುಳಿತು ಕೆಲಸ ಮಾಡಲು ಸಿದ್ಧವಿರುವ ಎಂ.ಕೆ. ಸ್ಟಾಲಿನ್ ಅವರ ನಿರ್ಧಾರವನ್ನು ಕಮಲ್ ಶ್ಲಾಘಿಸಿದ್ದಾರೆ.
ಪ್ರಕಾಶ್ ರಾಜ್ ಆಕ್ರೋಶ: ನಟ ಪ್ರಕಾಶ್ ರಾಜ್ ಅವರು ರಾಜ್ಯಪಾಲರ ವರ್ತನೆಯನ್ನು ‘ಅಸಂವಿಧಾನಿಕ’ ಎಂದು ಕರೆದಿದ್ದಾರೆ. “ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ವಿಜಯ್ ಅವರಿಗೆ ಜನಾದೇಶ ಸಿಕ್ಕಿದೆ ಎನ್ನುವುದನ್ನು ಯಾರೂ ಮರೆಯಬಾರದು. ಸಂವಿಧಾನಬದ್ಧವಾಗಿ ಅವರಿಗೆ ಸಿಗಬೇಕಾದ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟರಾದ ವಿಶಾಲ್, ಪೋಸಾನಿ ಕೃಷ್ಣ ಮುರಳಿ ಸೇರಿದಂತೆ ದಕ್ಷಿಣ ಭಾರತದ ಹಲವು ಗಣ್ಯರು ರಾಜ್ಯಪಾಲರ ‘ಕಾದು ನೋಡುವ ತಂತ್ರ’ದ ವಿರುದ್ಧ ದನಿಗೂಡಿಸಿದ್ದಾರೆ. ಒಟ್ಟಾರೆಯಾಗಿ, ಬಹುಮತ ಸಾಬೀತುಪಡಿಸಲು ಅತಿದೊಡ್ಡ ಪಕ್ಷಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಚಿತ್ರರಂಗದ ಗಣ್ಯರ ಒಕ್ಕೊರಲ ಒತ್ತಾಯವಾಗಿದೆ.
