TOP NEWS

Government School: ಸರ್ಕಾರಿ ಶಾಲೆಗಳ ದುಸ್ಥಿತಿ ಬಿಚ್ಚಿಟ್ಟ ನೀತಿ ಆಯೋಗದ ವರದಿ: ಮೂಲಸೌಕರ್ಯ ಮತ್ತು ಶಿಕ್ಷಕರ ಗುಣಮಟ್ಟದ ಮೇಲೆ ಆತಂಕ

1 Lakh government Schools in india facing water issue

ನವದೆಹಲಿ: ದೇಶದ ಶೈಕ್ಷಣಿಕ (Government School) ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವ “ಸ್ಕೂಲ್ ಎಜುಕೇಶನ್ ಸಿಸ್ಟಮ್ ಇನ್ ಇಂಡಿಯಾ” ವರದಿಯನ್ನು ನೀತಿ ಆಯೋಗ ಪ್ರಕಟಿಸಿದೆ. ಈ ವರದಿಯ ಪ್ರಕಾರ, ಸಾವಿರಾರು ಶಾಲೆಗಳು ಇಂದಿಗೂ ವಿದ್ಯುತ್, ನೀರು ಮತ್ತು ಶೌಚಾಲಯದಂತಹ ಕನಿಷ್ಠ ಸೌಕರ್ಯಗಳಿಲ್ಲದೆ ಸೊರಗುತ್ತಿವೆ.

ಸೌಲಭ್ಯಗಳಿಲ್ಲದ ಶಾಲೆಗಳು: ವರದಿಯ ಅನ್ವಯ, ದೇಶದ ಸುಮಾರು 1.19 ಲಕ್ಷ ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಶಾಲೆಗಳ ಸಂಖ್ಯೆ ಸುಮಾರು 98 ಸಾವಿರಕ್ಕೂ ಅಧಿಕವಿದ್ದರೆ, 14 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆಯೇ ಇಲ್ಲ. ಇನ್ನು ವಿಜ್ಞಾನ ಪ್ರಯೋಗಾಲಯಗಳ ಕೊರತೆಯೂ ಎದ್ದು ಕಾಣುತ್ತಿದ್ದು, ಕೇವಲ ಅರ್ಧದಷ್ಟು ಪ್ರೌಢಶಾಲೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ.

ಶಿಕ್ಷಕರ ಕೊರತೆ ಮತ್ತು ಬೋಧನಾ ಗುಣಮಟ್ಟ: ಶಿಕ್ಷಣದ ಗುಣಮಟ್ಟದ ವಿಷಯಕ್ಕೆ ಬಂದರೆ, ದೇಶದ 1.04 ಲಕ್ಷ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಹಾರದಂತಹ ರಾಜ್ಯಗಳಲ್ಲಿ ಶಿಕ್ಷಕರ ಹುದ್ದೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಉಳಿದಿವೆ. ಕಳವಳಕಾರಿ ಸಂಗತಿಯೆಂದರೆ, ತಾವು ಬೋಧಿಸುವ ವಿಷಯಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆಯುವ ಸಾಮರ್ಥ್ಯವಿರುವ ಶಿಕ್ಷಕರು ಕೇವಲ ಶೇ. 10 ರಿಂದ 15 ರಷ್ಟು ಮಾತ್ರ ಇದ್ದಾರೆ. ಗಣಿತ ವಿಷಯದಲ್ಲಿ ಉತ್ತಮ ಅಂಕ ಗಳಿಸುವ ಶಿಕ್ಷಕರ ಪ್ರಮಾಣ ಶೇ. 2 ರಷ್ಟು ಮಾತ್ರ ಇರುವುದು ಶಿಕ್ಷಣದ ಗುಣಮಟ್ಟದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಹೆಚ್ಚುತ್ತಿರುವ ಮಕ್ಕಳ ಡ್ರಾಪ್-ಔಟ್: ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ರಾಷ್ಟ್ರೀಯ ಮಟ್ಟದಲ್ಲಿ ಶೇ. 11.5 ರಷ್ಟಿದೆ. ಕರ್ನಾಟಕದ ಮಟ್ಟಿಗೆ ಈ ಪ್ರಮಾಣ ಶೇ. 18.3 ರಷ್ಟಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 20 ರಷ್ಟು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ. ಇದಲ್ಲದೆ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಸುಮಾರು 8 ಸಾವಿರ ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ ಎಂಬುದು ಆಘಾತಕಾರಿ.

ಒಟ್ಟಾರೆ ಸಾಧನೆ: ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಒಡಿಶಾದಂತಹ ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಆದರೆ ಜಾರ್ಖಂಡ್ ಮತ್ತು ಗುಜರಾತ್‌ನಂತಹ ರಾಜ್ಯಗಳು ಈ ಪಟ್ಟಿಯಲ್ಲಿ ಹಿಂದುಳಿದಿವೆ. ಶಿಕ್ಷಕರು ತಮ್ಮ ಬೋಧನಾ ಸಮಯದ ಶೇ. 14 ರಷ್ಟನ್ನು ಶೈಕ್ಷಣಿಕೇತರ ಕೆಲಸಗಳಿಗೆ (ಚುನಾವಣೆ, ಸಮೀಕ್ಷೆ ಇತ್ಯಾದಿ) ಬಳಸುತ್ತಿರುವುದು ಕೂಡ ಶಿಕ್ಷಣ ಕುಸಿಯಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಶಿಕ್ಷಣಕ್ಕೆ ಜಿಡಿಪಿಯ ಕೇವಲ ಶೇ. 4.6 ರಷ್ಟು ಹಣ ವ್ಯಯಿಸುತ್ತಿರುವುದನ್ನು ಬದಲಿಸಿ, ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಅಗತ್ಯವಿದೆ ಎಂದು ನೀತಿ ಆಯೋಗ ಪ್ರತಿಪಾದಿಸಿದೆ.

ಇದನ್ನೂ ಒದಿ: ವಿಜಯ್‌ ಪರ ಚಿತ್ರರಂಗದ ಗಣ್ಯರ ಬ್ಯಾಟಿಂಗ್‌; ರಾಜ್ಯಪಾಲರ ನಡೆಗೆ ಕಮಲ್ ಹಾಸನ್, ಪ್ರಕಾಶ್ ರಾಜ್ ತೀವ್ರ ಆಕ್ಷೇಪ

Leave a Reply

Your email address will not be published. Required fields are marked *