TOP NEWS

ED Raid: ಮನೆ ಖರೀದಿದಾರರಿಗೆ ನೂರಾರು ಕೋಟಿ ವಂಚನೆ ಆರೋಪ: ‘ಓಝೋನ್ ಅರ್ಬಾನಾ’ ಸಿಎಂಡಿ ವಾಸುದೇವನ್ ಇಡಿ ಬಲೆಗೆ!

Ozone Urbana Homebuyer Scam CMD Vasudevan Remanded to 14 Day ED raid custody

ಬೆಂಗಳೂರು: ಮನೆ ಖರೀದಿದಾರರಿಗೆ ಹಾಗೂ ಸಾರ್ವಜನಿಕರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಗಂಭೀರ ಆರೋಪದಡಿ ‘ಓಝೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (ಸಿಎಂಡಿ) ಮತ್ತು ಪ್ರವರ್ತಕ ಎಸ್. ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ (ED Raid) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) 2002 ರ ಸೆಕ್ಷನ್ 19 ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಈ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದೆ.

ಕೋಟ್ಯಾಂತರ ಹಣ ಗುಳುಂ ಮಾಡಿದ್ದ ವಾಸುದೇವನ್

ಫ್ಲ್ಯಾಟ್‌ ಹಾಗೂ ನಿವೇಶನಗಳನ್ನು ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸದೆ ಹಾಗೂ ಹಣವನ್ನು ಹಿಂತಿರುಗಿಸದೆ ಮೋಸ ಎಸಗಿರುವ ಕುರಿತು ವಾಸುದೇವನ್ ಅವರ ವಿರುದ್ಧ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದ ಇಡಿ ಅಧಿಕಾರಿಗಳು, ವಿಚಾರಣೆ ನಡೆಸಿ ಅವರ ವಿರುದ್ಧ ಭದ್ರವಾದ ಸಾಕ್ಷ್ಯಗಳನ್ನು ಕಲೆಹಾಕಿದ ನಂತರ ಈ ಕಠಿಣ ಕ್ರಮ ಕೈಗೊಂಡಿದ್ದಾರೆ.‌

ನ್ಯಾಯ ಸಿಗುವ ಭರವಸೆಯಲ್ಲಿ ಜನರು

ಬಂಧನದ ನಂತರ ಆರೋಪಿ ವಾಸುದೇವನ್ ಅವರನ್ನು ಬೆಂಗಳೂರಿನ ವಿಶೇಷ ಪಿಎಂಎಲ್‌ಎ (PMLA) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಕರಣದ ಆಳವಾದ ತನಿಖೆ ಹಾಗೂ ಹೂಡಿಕೆದಾರರ ಹಣ ಎಲ್ಲಿಗೆ ತಲುಪಿದೆ ಎನ್ನುವ ಜಾಲವನ್ನು ಭೇದಿಸಲು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಡಿ ಪರ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು 14 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಡಿ ಅಧಿಕಾರಿಗಳು ವಾಸುದೇವನ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಿದ್ದು, ವಂಚನೆಗೊಳಗಾದ ನೂರಾರು ಮನೆ ಖರೀದಿದಾರರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.

ಇದನ್ನೂ ಓದಿ: ಅಟ್ಟಿಕಾ ಗೋಲ್ಡ್‌ಗೆ ಇಡಿ ಶಾಕ್: ಬೆಂಗಳೂರು, ಚೆನ್ನೈ ಸೇರಿ 16 ಕಡೆ ಭಾರಿ ದಾಳಿ, ನಗದು-ಬಂಗಾರ ಜಪ್ತಿ!

Leave a Reply

Your email address will not be published. Required fields are marked *