Prajwal Revanna: ಜೈಲಿನಲ್ಲೇ ದೇವರ ಫೋಟೋ ಹಿಂದೆ ಮೊಬೈಲ್ ಸೀಕ್ರೆಟ್! ಪ್ರಜ್ವಲ್ ರೇವಣ್ಣ ಬಳಿ ಎರಡನೇ ಫೋನ್ ಪತ್ತೆ

Prajwal Revanna Row Second Mobile Phone Found in Parappana Agrahara Jail Barrack

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಳಿ ಮತ್ತೊಮ್ಮೆ ಮೊಬೈಲ್ ಫೋನ್ ಸಿಕ್ಕಿಬಿದ್ದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರ ತನಿಖೆ ವೇಳೆ ಫೋನ್ ಸಿಕ್ಕಿ ಪ್ರಕರಣ ದಾಖಲಾಗಿದ್ದರೂ, ಮತ್ತೆ ಎರಡನೇ ಬಾರಿ ಮೊಬೈಲ್ ಪತ್ತೆಯಾಗಿರುವುದು ಜೈಲಿನ ಭದ್ರತಾ ಲೋಪವನ್ನು ಜಗಜ್ಜಾಹೀರುಗೊಳಿಸಿದೆ.

ದೇವರ ಫೋಟೋದ ಹಿಂಭಾಗ ಪತ್ತೆಯಾದ ಫೋನ್‌

ಕಾರಾಗೃಹದ ‘ಸಿ’ ಬ್ಯಾರಕ್‌ನ 2ನೇ ಕೊಠಡಿಯಲ್ಲಿ ಜೈಲು ಸಿಬ್ಬಂದಿ ಹಾಗೂ ಪೊಲೀಸರು ದಿಢೀರ್ ಪರಿಶೀಲನೆ ನಡೆಸಿದಾಗ, ಗೋಡೆಯ ಮೇಲಿದ್ದ ದೇವರ ಫೋಟೋದ ಹಿಂಭಾಗದಲ್ಲಿ ಬಚ್ಚಿಟ್ಟಿದ್ದ ಸ್ವಿಚ್ ಆಫ್ ಸ್ಥಿತಿಯ ಮೊಬೈಲ್ ಪತ್ತೆಯಾಗಿದೆ. ಸಾಧನದಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲವಾದರೂ, ಅಧಿಕಾರಿಗಳು ಅದನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೊಂದು ಹೊಸ ಎಫ್‌ಐಆರ್ ದಾಖಲಾಗಿದೆ. ನಿಷೇಧಿತ ಫೋನ್ ಜೈಲಿನೊಳಗೆ ತಲುಪಿದ್ದು ಹೇಗೆ ಮತ್ತು ಇದರಲ್ಲಿ ಸಿಬ್ಬಂದಿಯ ಭಾಗಿಯಾಗುವಿಕೆ ಇದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

ಡಿಜಿಪಿ ಅಲೋಕ್ ಕುಮಾರ್ ಭೇಟಿ

ಈ ಗಂಭೀರ ಭದ್ರತಾ ವೈಫಲ್ಯದ ಬೆನ್ನಲ್ಲೇ ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಶುಕ್ರವಾರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ್ದು, ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಸುಮಾರು 10ರಿಂದ 12 ನಿಮಿಷಗಳ ಕಾಲ ಕಠಿಣ ವಿಚಾರಣೆ ನಡೆಸಿದ್ದಾರೆ.

“ನಿಮ್ಮ ಈ ನಡೆ ಇಡೀ ಇಲಾಖೆಗೆ ಮುಜುಗರ ತಂದಿದೆ. ನನ್ನ ವೃತ್ತಿಜೀವನದಲ್ಲೇ ಈ ಮಟ್ಟದ ಬೇಸರವಾಗಿರಲಿಲ್ಲ, ನೀವು ನನ್ನನ್ನು ತಲೆ ತಗ್ಗಿಸುವಂತೆ ಮಾಡಿದ್ದೀರಿ. ಜೈಲಿಗೆ ಫೋನ್ ತಲುಪಿಸಿದ್ದು ಯಾರು ಎಂಬುದು ನನಗೆ ತಿಳಿದಿದೆ, ನಾಟಕ ಬಂದ್ ಮಾಡಿ ನಿಜ ಹೇಳಿ. ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಡಿಜಿಪಿ ಅವರ ತೀವ್ರ ತರಾಟೆಯ ನಡುವೆಯೂ ಪ್ರಜ್ವಲ್ ರೇವಣ್ಣ “ನಾನೇನೂ ಮಾಡಿಲ್ಲ ಸಾರ್” ಎಂದು ಸಮರ್ಥನೆ ನೀಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಕೈದಿಗೆ ಫೋನ್ ಸಿಕ್ಕಿದ್ದು ಹೇಗೆ ಎಂಬುದರ ಬಗ್ಗೆ ಜೈಲು ಇಲಾಖೆ ಆಂತರಿಕ ತನಿಖೆ ತೀವ್ರಗೊಳಿಸಿದೆ.

ಇದನ್ನೂ ಓದಿ: ಕೆಪಿಸಿ ಸಾಗುವಳಿದಾರರ ಸಮಸ್ಯೆ, ಹರತಾಳು ಹಾಲಪ್ಪಗೆ ಮನವಿ

Leave a Reply

Your email address will not be published. Required fields are marked *