TOP NEWS

World Record: ದಾಖಲೆ ಬರೆದ ಬೆಂಗಳೂರಿನ ಪುಟಾಣಿ: 2 ವರ್ಷ ತುಂಬುವ ಮುನ್ನವೇ 4 ವಿಶ್ವ ದಾಖಲೆ ಬರೆದ ಕಿಕ್ ಸ್ಕೂಟರ್ ಸುಂದರಿ ಅಕೀರಾ!

Bengalurus Wonder Kid Scooter Sensation Akira Bags 4 World Records Before Turning Two

ಬೆಂಗಳೂರು: ಬೆಂಗಳೂರಿನ ಪುಟಾಣಿ ಬಾಲಕಿಯೊಬ್ಬಳು ದಾಖಲೆಗಳ (World Record) ಪುಸ್ತಕ ಪುಟ ತಿರುವಿ ಹೊಸ ಇತಿಹಾಸ ಬರೆಯುತ್ತಿದ್ದಾಳೆ. ಆಕೆಯ ಹೆಸರೇ ಅಕೀರಾ. ಕಿಕ್ ಸ್ಕೂಟರ್ (ಕಾಲು ಒದ್ದು ಓಡಿಸುವ ಸ್ಕೂಟರ್) ಸವಾರಿ ಮಾಡುತ್ತಾ ದೇಶದಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ಈ ಪುಟಾಣಿಗೆ ಸೋಲೊಪ್ಪಿಕೊಳ್ಳುವುದು ಗೊತ್ತೇ ಇಲ್ಲ. ಸ್ಕೂಟರ್ ಓಡಿಸುವಾಗ ಅಕೀರಾ ಕೆಳಗೆ ಬಿದ್ದರೆ, ಅತ್ತು ರಗಳೆ ಮಾಡುವುದಿಲ್ಲ. ಬದಲಿಗೆ ಮುದ್ದಾಗಿ ನಕ್ಕು, ತಕ್ಷಣವೇ ಮೇಲೆದ್ದು ಮತ್ತೆ ಸವಾರಿ ಮುಂದುವರಿಸುತ್ತಾಳೆ.

ಎರಡು ವರ್ಷದ ಬಾಲಕಿಯ ಅದ್ಭುತ ಸಾಧನೆ

ಕೇವಲ ಎರಡು ವರ್ಷ ವಯಸ್ಸಿನ ಈ ಬೆಂಗಳೂರಿನ ಬಾಲಕಿ ತನ್ನ ಈ ಸಾಹಸ ಮತ್ತು ಧೈರ್ಯದಿಂದಾಗಿ ಈಗಾಗಲೇ ನಾಲ್ಕು ವಿಶ್ವ ದಾಖಲೆಗಳು ಮತ್ತು ಮೂರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಕಿಕ್ ಸ್ಕೂಟರ್ ಸವಾರಿ, ಈಜು ಸೇರಿದಂತೆ ಹಲವು ದೈಹಿಕ ಚಟುವಟಿಕೆಗಳಲ್ಲಿ ಅಕೀರಾ ಅಸಾಧಾರಣ ಸಾಧನೆ ಮಾಡಿದ್ದಾಳೆ. ಇನ್ನು ಸರಿಯಾಗಿ ಹೆಜ್ಜೆ ಇಡಲು ಕಲಿಯುವ ವಯಸ್ಸಿನಲ್ಲೇ ಆಕೆ ಈ ಮಟ್ಟದ ಸಾಧನೆ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.

ಅಕೀರಾಳ ಈ ವಿಶಿಷ್ಟ ಪ್ರಯಾಣ ಅಕಸ್ಮಾತ್ ಆಗಿ ಆರಂಭವಾಗಿತ್ತು. ಆಕೆಗೆ ಸುಮಾರು ಹದಿನಾಲ್ಕೂವರೆ ತಿಂಗಳಿದ್ದಾಗ, ತನ್ನ ಅಣ್ಣ ಸ್ಕೂಟರ್ ಓಡಿಸುವುದನ್ನು ನೋಡಿ ತಾನೂ ಓಡಿಸಬೇಕೆಂದು ಹಠ ಹಿಡಿದಿದ್ದಳು. ಅಣ್ಣನನ್ನು ನೋಡಿ ಕಲಿಯಲು ಆರಂಭಿಸಿದ ಆಟ, ದಿನಕಳೆದಂತೆ ಆಕೆಯ ನೆಚ್ಚಿನ ಹವ್ಯಾಸವಾಗಿ ಬದಲಾಯಿತು. ದಿನವಿಡೀ ಸ್ಕೂಟರ್ ಮೇಲೆಯೇ ಕಳೆಯುತ್ತಿದ್ದ ಅಕೀರಾ, ಇಡೀ ಮನೆಯ ಸುತ್ತಮುತ್ತ ಸವಾರಿ ಮಾಡುತ್ತಾ ಸಖತ್ ಎಂಜಾಯ್ ಮಾಡಲು ಶುರುಮಾಡಿದಳು. ಇಲ್ಲಿ ಆಕೆಗೆ ಯಾವುದೇ ಕಠಿಣ ತರಬೇತಿ ಇರಲಿಲ್ಲ ಅಥವಾ ದಾಖಲೆ ಬರೆಯಬೇಕು ಎನ್ನುವ ಒತ್ತಡವೂ ಇರಲಿಲ್ಲ. ಅಕೀರಾಳಿಗೆ ಸ್ಕೂಟರ್ ಓಡಿಸುವುದು ಇಷ್ಟ, ಅದಕ್ಕಾಗಿಯೇ ಆಕೆ ಸವಾರಿ ಮಾಡುತ್ತಾಳೆ ಎಂದು ಆಕೆಯ ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ.

ಪೋಷಕರಿಗೂ ಇದೆ ಕ್ರೀಡಾ ಹಿನ್ನಲೆ

ಅಕೀರಾಳ ಈ ಅದ್ಭುತ ಸಾಧನೆಯ ಹಿಂದೆ ಆಕೆಯ ಪೋಷಕರ ಪ್ರೋತ್ಸಾಹ ದೊಡ್ಡದಾಗಿದೆ. ಸಾಮಾಜಿಕ ಜಾಲತಾಣದ ಮಾಹಿತಿ ಪ್ರಕಾರ, ಅಕೀರಾಳ ತಂದೆ-ತಾಯಿ ಇಬ್ಬರೂ ಕ್ರೀಡಾ ಹಿನ್ನೆಲೆಯುಳ್ಳವರಾಗಿದ್ದಾರೆ. ಇದೇ ಕಾರಣಕ್ಕೆ ಅವರು ಮಗಳ ಆಸಕ್ತಿಯನ್ನು ಗುರುತಿಸಿ, ಆಕೆಗೆ ಯಾವುದೇ ಒತ್ತಡ ಹೇರದೆ ತಾಳ್ಮೆಯಿಂದ ಬೆಂಬಲ ನೀಡುತ್ತಾ ಬಂದಿದ್ದಾರೆ. ಮಗಳ ಮೇಲಿನ ಅವರ ಪ್ರೀತಿ ಮತ್ತು ಪ್ರೋತ್ಸಾಹವೇ ಇಂದು ಆಕೆಗೆ ಜಾಗತಿಕ ಮಟ್ಟದ ಮನ್ನಣೆ ತಂದುಕೊಟ್ಟಿದೆ. ಕಿಕ್ ಸ್ಕೂಟರ್ ಸವಾರಿ ಮತ್ತು ಈಜಿನಲ್ಲಿ ಅಕೀರಾ ಮಾಡಿದ ಸಾಹಸಗಳು ಇಂದು ದೇಶದಾದ್ಯಂತ ಸುದ್ದಿಯಾಗುತ್ತಿದ್ದು, ಆಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸುತ್ತಿವೆ.

ಇದನ್ನೂ ಓದಿ: ಸಿಸಿಟಿವಿ ಕಣ್ತಪ್ಪಿಸಿ ಕಾಣಿಕೆ ಹಣ ಲೂಟಿ!: ರಾಮ ಮಂದಿರ ಕಳ್ಳತನ ಹಗರಣದ ಎಸ್‌ಐಟಿ ರಿಪೋರ್ಟ್ ಸಿದ್ಧ

Leave a Reply

Your email address will not be published. Required fields are marked *