TOP NEWS

Sheikh Hasina: ಮರಣದಂಡನೆ ತೀರ್ಪಿನ ಬೆನ್ನಲ್ಲೇ ಶೇಖ್ ಹಸೀನಾ ದಿಟ್ಟ ಘೋಷಣೆ: ಜೈಲಿಗೆ ಹಾಕಿದರೂ, ಕೊಂದರೂ ಡಿಸೆಂಬರ್‌ನಲ್ಲಿ ಬಾಂಗ್ಲಾಕ್ಕೆ ಮರಳುವುದಾಗಿ ಭರವಸೆ!

Kill me or jail me I will return Ousted Bangladesh Sheikh Hasina announces December homecoming

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಭೀಕರ ವಿದ್ಯಾರ್ಥಿ ದಂಗೆಯ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ತಾವು ಮತ್ತು ದೇಶ ತೊರೆದಿರುವ ಅವಾಮಿ ಲೀಗ್ ಪಕ್ಷದ ಪ್ರಮುಖ ನಾಯಕರು ಸ್ವದೇಶಕ್ಕೆ ವಾಪಸ್ ಆಗಲಿದ್ದೇವೆ ಎಂದು ಪ್ರಕಟಿಸಿದ್ದಾರೆ. “ನಾನು ಬಾಂಗ್ಲಾ ಮಣ್ಣಿಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಜೈಲಿಗಟ್ಟಬಹುದು ಅಥವಾ ಹತ್ಯೆ ಮಾಡಬಹುದು ಎಂಬ ಕಟು ಸತ್ಯ ನನಗೆ ತಿಳಿದಿದೆ. ಆದರೂ ನಾನು ತಾಯ್ನಾಡಿಗೆ ಮರಳುವುದು ಖಚಿತ” ಎಂದು ಅವರು ದೃಢವಾಗಿ ಹೇಳಿದ್ದಾರೆ.

78 ವರ್ಷ ಪ್ರಾಯದ ಶೇಖ್ ಹಸೀನಾ ಅವರು 2024ರ ಆಗಸ್ಟ್‌ನಲ್ಲಿ ಉಂಟಾದ ಸಾರ್ವಜನಿಕ ಆಕ್ರೋಶಕ್ಕೆ ಹೆದರಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಈಗ ತಮ್ಮ ದೇಶಕ್ಕೆ ಮರಳಿದ ತಕ್ಷಣವೇ ಅಲ್ಲಿನ ಸ್ಥಳೀಯ ನ್ಯಾಯಾಲಯಗಳ ಮುಂದೆ ಕಾನೂನಾತ್ಮಕವಾಗಿ ಶರಣಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಹಾಲಿ ಸರ್ಕಾರದೊಂದಿಗೆ ಯಾವುದೇ ಒಪ್ಪಂದವಿಲ್ಲ: ಪ್ರಸ್ತುತ ಬಾಂಗ್ಲಾದೇಶವನ್ನು ಮುನ್ನಡೆಸುತ್ತಿರುವ ಮಧ್ಯಂತರ ಸರ್ಕಾರದೊಂದಿಗೆ ತಾವಾಗಲಿ ಅಥವಾ ತಮ್ಮ ಪಕ್ಷದ ಇತರ ಮುಖಂಡರಾಗಲಿ ಸ್ವದೇಶಕ್ಕೆ ಬರುವ ಬಗ್ಗೆ ಯಾವುದೇ ಗುಪ್ತ ಮಾತುಕತೆ ನಡೆಸಿಲ್ಲ ಎಂದು ಹಸೀನಾ ಸ್ಪಷ್ಟಪಡಿಸಿದ್ದಾರೆ. “ಅಲ್ಲಿನ ಪ್ರಸ್ತುತ ಆಡಳಿತಗಾರರು ನನ್ನ ಪ್ರಾಣವನ್ನೇ ತೆಗೆಯಬಹುದು. ಆದರೆ ಸದ್ಯ ನನ್ನ ದೇಶದಲ್ಲಿ ಲಕ್ಷಾಂತರ ಕಾರ್ಯಕರ್ತರು ಮತ್ತು ನಾಯಕರನ್ನು ದಮನ ಮಾಡಲಾಗುತ್ತಿದೆ, ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಸ್ಥಿತಿಯಲ್ಲಿ ನಾನು ಅವರೊಂದಿಗೆ ಇರಬೇಕು. ಒಂದು ವೇಳೆ ನನಗೆ ಸಾವು ಬರುವುದೇ ಆದಲ್ಲಿ, ಅದು ನನ್ನ ಹೆತ್ತವರ ಸಮಾಧಿ ಇರುವ, ಅವರ ರಕ್ತ ಚೆಲ್ಲಿದ ಸ್ವಂತ ತಾಯ್ನಾಡಿನ ಮಣ್ಣಿನಲ್ಲೇ ಬರಲಿ” ಎಂದು ಅವರು ಭಾವುಕರಾಗಿದ್ದಾರೆ.

ನ್ಯಾಯಮಂಡಳಿಯಿಂದ ಗಲ್ಲು ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ನಿರ್ಧಾರ: ವಿಶೇಷವೆಂದರೆ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು (ICT) ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ. 2024ರ ವಿದ್ಯಾರ್ಥಿ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಲು ಆದೇಶಿಸಿದ ಹಾಗೂ ನೂರಾರು ಪ್ರತಿಭಟನಾಕಾರರ ಸಾಮೂಹಿಕ ಹತ್ಯೆಗೆ ಕಾರಣರಾದ ಆರೋಪದಡಿ ನ್ಯಾಯಾಲಯ ಈ ಗಲ್ಲು ಶಿಕ್ಷೆಯ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೂ ಮರಣದಂಡನೆ ವಿಧಿಸಲಾಗಿದ್ದು, ಮಾಜಿ ಪೊಲೀಸ್ ಮಹಾನಿರ್ದೇಶಕ (IGP) ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೆ 5 ವರ್ಷಗಳ ಸೆರೆಮನೆ ವಾಸದ ಶಿಕ್ಷೆಯಾಗಿದೆ. ಇದರೊಂದಿಗೆ ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವರ ಹೆಸರಿನಲ್ಲಿರುವ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ. ಗಲ್ಲು ಶಿಕ್ಷೆಯ ಭೀತಿ ಎದುರಾಗಿದ್ದರೂ ತಾಯ್ನಾಡಿಗೆ ಮರಳಲು ಸಜ್ಜಾಗಿರುವ ಹಸೀನಾ ನಿರ್ಧಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಕಿವಿಯೋಲೆ ಉಡುಗೊರೆ ನೀಡಿದ ಭಾರತೀಯ ವ್ಯಾಪಾರಿ: ನೆಟ್ಟಿಗರ ಮನಗೆದ್ದ ವೈರಲ್ ವಿಡಿಯೋ!

Leave a Reply

Your email address will not be published. Required fields are marked *