TOP NEWS

Ramayana: ₹4,000 ಕೋಟಿಯ ‘ರಾಮಾಯಣ’ಕ್ಕೆ ಮುಳುವಾಯಿತೇ ‘ಆದಿಪುರುಷ್‌’ ನೆರಳು? ಹಕ್ಕು ಖರೀದಿಸಲು ವಿತರಕರ ಹಿಂದೇಟು!

Ramayana theatrical rights row Distributors back out of Ranbir Yash starrer citing Adipurush failure

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೈಭವೋಪೇತ ಹಾಗೂ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಣ್​​ಬೀರ್ ಕಪೂರ್, ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರಂತಹ ಘಟಾನುಘಟಿ ತಾರೆಯರ ದಂಡೇ ಇರುವ ಈ ಚಿತ್ರದ ಮೊದಲ ಭಾಗವನ್ನು ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಆದರೆ, ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಚಿತ್ರದ ನಿರ್ಮಾಪಕರಿಗೆ ವಿತರಣೆಯ ದೊಡ್ಡ ಸವಾಲು ಎದುರಾಗಿದೆ. ಚಿತ್ರದ ಪ್ರದರ್ಶನ ಹಕ್ಕುಗಳನ್ನು ಖರೀದಿಸಲು ದೊಡ್ಡ ದೊಡ್ಡ ವಿತರಕರು ಮುಂದೆ ಬರುತ್ತಿಲ್ಲ ಎಂಬ ವದಂತಿಗಳು ಸಿನಿಕುಲದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

250 ಕೋಟಿ ಆಫರ್‌ ನೀಡಿದ ನಿರ್ಮಾಣ ಸಂಸ್ಥೆ

ಇತ್ತೀಚೆಗೆ ಚಿತ್ರದ ನಿರ್ಮಾಪಕರು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವಿತರಕರಿಗಾಗಿ ಸಿನಿಮಾದ ಕೆಲವು ವಿಶೇಷ ದೃಶ್ಯಗಳ ಪ್ರದರ್ಶನ ಏರ್ಪಡಿಸಿದ್ದರು. ಈ ವೇಳೆ ಚಿತ್ರದ ಥಿಯೇಟರ್ ಹಕ್ಕುಗಳನ್ನು ಕನಿಷ್ಠ 500 ಕೋಟಿ ರೂಪಾಯಿಗೆ ಮಾರಾಟ ಮಾಡುವ ಲೆಕ್ಕಾಚಾರ ನಿರ್ಮಾಪಕರದ್ದಾಗಿತ್ತು. ಆದರೆ, ಸಿನಿಮಾದ ದೃಶ್ಯಗಳನ್ನು ವೀಕ್ಷಿಸಿದ ಪ್ರಮುಖ ಕಂಪನಿಯೊಂದು ಕೇವಲ 250 ಕೋಟಿ ರೂಪಾಯಿಗಳ ಆಫರ್ ನೀಡಿದೆ ಎನ್ನಲಾಗಿದೆ. ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಭಾಗಗಳಾಗಿ ಮೂಡಿಬರುತ್ತಿರುವ ಈ ಮೆಗಾ ಪ್ರಾಜೆಕ್ಟ್‌ಗೆ ಇಷ್ಟು ಕಡಿಮೆ ಮೊತ್ತದ ಬೇಡಿಕೆ ಬಂದಿರುವುದು ಚಿತ್ರತಂಡಕ್ಕೆ ಆಘಾತ ತಂದಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಚಿತ್ರದ ಬಗ್ಗೆ ನಿರೀಕ್ಷಿತ ಮಟ್ಟದ ಕ್ರೇಜ್ ಸೃಷ್ಟಿಯಾಗದೇ ಇರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ನಿರ್ಮಾಪಕರನ್ನ ಕಾಡುತ್ತಿದೆ ಭಯ

ಇದರೊಂದಿಗೆ ವಿತರಕರನ್ನು ಹಳೆಯದೊಂದು ಕಹಿ ನೆನಪು ಕಾಡುತ್ತಿದೆ. ಈ ಹಿಂದೆ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಕೂಡ ರಾಮಾಯಣದ ಕಥೆಯನ್ನೇ ಆಧರಿಸಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಆದರೆ, ಆ ಚಿತ್ರದ ಸಂಭಾಷಣೆ ಮತ್ತು ಪಾತ್ರಗಳ ಚಿತ್ರಣ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನ್ಯಾಯಾಲಯದಿಂದಲೂ ಆಕ್ಷೇಪ ಎದುರಿಸಿದ್ದ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ರಾಮಾಯಣದಂತಹ ಪವಿತ್ರ ಕಾವ್ಯವನ್ನು ತೆರೆಗೆ ತರುವಾಗ ಪ್ರೇಕ್ಷಕರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಿನಿಮಾ ನಿಷೇಧಕ್ಕೊಳಗಾಗುವ ಭೀತಿ ಇರುತ್ತದೆ. ಹೀಗಾಗಿ ‘ಆದಿಪುರುಷ್‌’ ಅನುಭವಿಸಿದ ನಷ್ಟದ ಭಯದಿಂದಾಗಿ ವಿತರಕರು ‘ರಾಮಾಯಣ’ದಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗಿದೆ.

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಕೂಡ ಈ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಜೀಮರ್ ಅವರ ಸಂಗೀತ ಈ ಚಿತ್ರಕ್ಕಿದೆ. ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ, ವಿತರಕರ ಈ ನಿರಾಸಕ್ತಿ ಚಿತ್ರದ ಮುಂದಿನ ಹಾದಿಯನ್ನು ಹೇಗೆ ಬದಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 28 ವರ್ಷಗಳ ಬಳಿಕ ನಾಗಾರ್ಜುನ್-ಟಬು ಕಂಬ್ಯಾಕ್

Leave a Reply

Your email address will not be published. Required fields are marked *