TOP NEWS

Congress: ಕೆಪಿಸಿಸಿ ಪುನಾರಚನೆಗೆ ಬಿ.ಕೆ. ಹರಿಪ್ರಸಾದ್ ಮಾಸ್ಟರ್ ಪ್ಲಾನ್: ಮಂಗಳವಾರ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸರ್ವ ಸದಸ್ಯರ ಮೆಗಾ ಸಭೆ!

Congress Mega Meet KPCC to Reshuffle Team, Counter Opposition on Voter List Row

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಗದ್ದುಗೆ ಏರಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಗೆ (Congress) ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ, ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಪಿಸಿಸಿ ಸರ್ವ ಸದಸ್ಯರ ಮಹತ್ವದ ಸಾಮಾನ್ಯ ಸಭೆಯನ್ನು ಅವರು ಕರೆದಿದ್ದಾರೆ. ಮುಂಬರುವ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಬೃಹತ್ ಸಭೆ ಆಯೋಜನೆಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದದ ಬಗ್ಗೆ ಚರ್ಚೆ: ಈ ಸಭೆಯಲ್ಲಿ ಪ್ರಮುಖವಾಗಿ ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು ಗಂಭೀರ ಮಂಥನ ನಡೆಯಲಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯೂ ಸಭೆಯ ಪ್ರಮುಖ ಅಜೆಂಡಾವಾಗಿದೆ. ಎಸ್‌ಐಆರ್ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ, ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಪ್ರತಿಪಕ್ಷಗಳ ಈ ಜಂಟಿ ದಾಳಿಗೆ ಪ್ರತಿತಂತ್ರ ರೂಪಿಸಲು ಸಜ್ಜಾಗಿರುವ ಬಿ.ಕೆ. ಹರಿಪ್ರಸಾದ್, ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಳಮಟ್ಟದಲ್ಲಿ ಕಾರ್ಯಕರ್ತರು ಹೇಗೆ ನಿಗಾ ಇಡಬೇಕು ಎಂಬ ಬಗ್ಗೆ ಸಭೆಯಲ್ಲಿ ಗೈಡ್‌ಲೈನ್ಸ್ ನೀಡಲಿದ್ದಾರೆ.

ನಿಷ್ಕ್ರಿಯ ನಾಯಕರಿಗೆ ಕೊಕ್; ಹೊಸ ಮುಖಗಳಿಗೆ ಮಣೆ: ಹಿಂದೆ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಹಳೆಯ ಕೆಪಿಸಿಸಿ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಿ, ಹೊಸದಾಗಿ ಪುನಾರಚಿಸಲು ನೂತನ ಅಧ್ಯಕ್ಷರು ನಿರ್ಧರಿಸಿದ್ದಾರೆ. ಬರುವ ಆಗಸ್ಟ್ ತಿಂಗಳ ನಂತರ ಇಡೀ ಸಂಘಟನೆಗೆ ಹೊಸ ರೂಪ ಸಿಗಲಿದೆ. ಕಳೆದ ಕೆಲವು ವರ್ಷಗಳಿಂದ ಹೆಸರಿಗಷ್ಟೇ ಪದಾಧಿಕಾರಿಗಳಾಗಿದ್ದು, ಯಾವುದೇ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಕೆಪಿಸಿಸಿ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಈ ಬಾರಿ ಸಭೆಯ ಬೆನ್ನಲ್ಲೇ ಕೈಬಿಡಲು ತೀರ್ಮಾನಿಸಲಾಗಿದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರು ಹಾಗೂ ಯುವ ನಾಯಕರಿಗೆ ಹೊಸ ಪಟ್ಟಿಯಲ್ಲಿ ಆದ್ಯತೆ ಸಿಗಲಿದೆ.

2028ರ ಚುನಾವಣೆಗೆ ಇಂದಿನಿಂದಲೇ ತಯಾರಿ: ಎಲ್ಲಾ ಜನಾಂಗದವರಿಗೂ ಪ್ರಾತಿನಿಧ್ಯ ನೀಡುವ ‘ಸಾಮಾಜಿಕ ನ್ಯಾಯ’ದ ಸೂತ್ರದಡಿ ಹೊಸ ಪದಾಧಿಕಾರಿಗಳ ತಂಡವನ್ನು ಕಟ್ಟಲು ಬಿ.ಕೆ. ಹರಿಪ್ರಸಾದ್ ಸಿದ್ಧತೆ ನಡೆಸಿದ್ದಾರೆ. ಆ ಮೂಲಕ 2028ರ ಮುಂದಿನ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ಬಲಿಷ್ಠ ಅಡಿಪಾಯ ಹಾಕಲಾಗುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ದೊಡ್ಡ ಗುರಿ ಹೊಂದಿರುವ ನೂತನ ಸಾರಥಿಗೆ, ಸದ್ಯದಲ್ಲೇ ಎದುರಾಗಲಿರುವ ಬಿಬಿಎಂಪಿ (GBA), ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಾದ ಮೊದಲ ಸವಾಲು ಎದುರಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂಗಾರು ಏರುಪೇರು: ಜುಲೈ ಆರಂಭವಾದ್ರೂ 17 ಜಿಲ್ಲೆಗಳು, 129 ತಾಲ್ಲೂಕುಗಳಲ್ಲಿ ಮಳೆ ಕೊರತೆ ಭೀತಿ!

Leave a Reply

Your email address will not be published. Required fields are marked *