TOP NEWS

Rain; ಕರ್ನಾಟಕದಲ್ಲಿ ಮುಂಗಾರು ಏರುಪೇರು: ಜುಲೈ ಆರಂಭವಾದ್ರೂ 17 ಜಿಲ್ಲೆಗಳು, 129 ತಾಲ್ಲೂಕುಗಳಲ್ಲಿ ಮಳೆ ಕೊರತೆ ಭೀತಿ!

Karnataka Monsoon Disparity 17 Districts and 129 Taluks Stare at Rainfall Deficit Despite July Progress

ಬೆಂಗಳೂರು: ರಾಜ್ಯದಲ್ಲಿ ಜುಲೈ ಮೊದಲ ವಾರದಿಂದ ಮುಂಗಾರು ಮಳೆ ಕೊಂಚ ಚುರುಕುಗೊಂಡು ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರೂ, ಒಟ್ಟಾರೆ ಮಳೆಯ (Rain) ಹಂಚಿಕೆ ಮಾತ್ರ ಆತಂಕಕಾರಿಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಜೂನ್ 1ರಿಂದ ಜುಲೈ 6ರವರೆಗಿನ ಐದು ವಾರಗಳ ಅಧಿಕೃತ ವರದಿಯ ಪ್ರಕಾರ, ರಾಜ್ಯದ 17 ಜಿಲ್ಲೆಗಳಲ್ಲಿ ಇಂದಿಗೂ ಸಕಾಲಕ್ಕೆ ಮಳೆಯಾಗಿಲ್ಲ. ಪರಿಣಾಮವಾಗಿ ಬರೋಬ್ಬರಿ 129 ತಾಲ್ಲೂಕುಗಳು ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸೂಕ್ತ ಮಳೆಯಿಲ್ಲದೆ ಕಂಗಾಲಾಗಿವೆ.

ವಿಜಯನಗರದಲ್ಲಿ ಅತ್ಯಂತ ಕಡಿಮೆ ಮಳೆ; 13 ಜಿಲ್ಲೆಗಳಲ್ಲಿ ನಾರ್ಮಲ್ ವರದಿಯ ಅನ್ವಯ, ರಾಜ್ಯದಲ್ಲೇ ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಭೀಕರ ಮಳೆ ಕೊರತೆ ಎದುರಾಗಿದೆ. ಇಲ್ಲಿ ಜೂನ್‌ನಿಂದೀಚೆಗೆ ಕೇವಲ 37 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ 61ರಷ್ಟು ಹಿನ್ನಡೆಯಾಗಿದೆ. ಆದಾಗ್ಯೂ, ಕಳೆದ ವಾರಕ್ಕೆ ಹೋಲಿಸಿದರೆ ಸಾಮಾನ್ಯ ಮಳೆ ಕಂಡ ಜಿಲ್ಲೆಗಳ ಸಂಖ್ಯೆ ಕೊಂಚ ಸುಧಾರಿಸಿದ್ದು, ಪ್ರಸ್ತುತ ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ವಾಡಿಕೆಯಂತೆ ಸಾಧಾರಣ ಮಳೆಯಾಗಿದೆ.

ಹೋಬಳಿ ಮಟ್ಟದಲ್ಲೂ ಕೃಷಿಗೆ ಹಿನ್ನಡೆ ತಾಲ್ಲೂಕುವಾರು ಸ್ಥಿತಿಗತಿಯನ್ನು ಗಮನಿಸಿದರೆ, ಕೇವಲ 5 ತಾಲ್ಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಭಾರಿ ಮಳೆಯಾಗಿದೆ. ಉಳಿದಂತೆ 25 ತಾಲ್ಲೂಕುಗಳಲ್ಲಿ ಹೆಚ್ಚು, 70 ತಾಲ್ಲೂಕುಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಬರೋಬ್ಬರಿ 129 ತಾಲ್ಲೂಕುಗಳಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ. ಇನ್ನೂ 11 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿದೆ. ಹೋಬಳಿ ಮಟ್ಟದಲ್ಲಿ ನೋಡುವುದಾದರೆ, 38 ಹೋಬಳಿಗಳಲ್ಲಿ ಅತಿ ಹೆಚ್ಚು, 91 ಕಡೆ ಹೆಚ್ಚು ಹಾಗೂ 220 ಹೋಬಳಿಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಆದರೆ, ಕೃಷಿಗೆ ಹಿನ್ನಡೆಯಾಗುವ ರೀತಿಯಲ್ಲಿ 403 ಹೋಬಳಿಗಳಲ್ಲಿ ಮಳೆ ಕೊರತೆಯಾಗಿದ್ದು, ಮತ್ತೊಂದು ಭಾಗದ 89 ಹೋಬಳಿಗಳಲ್ಲಿ ಭೀಕರ ಒಣ ಹವೆ ಮುಂದುವರಿದಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟಿದೆ ಕೊರತೆ? (ಜೂನ್ 1 – ಜುಲೈ 6)

ಸಾಮಾನ್ಯವಾಗಿ ಹೆಚ್ಚು ಮಳೆ ಪಡೆಯುವ ಮಲೆನಾಡು ಹಾಗೂ ಕರಾವಳಿ ಭಾಗದಲ್ಲೂ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ. ಪ್ರಮುಖ ಜಿಲ್ಲೆಗಳ ಮಳೆ ಪ್ರಮಾಣ ಹೀಗಿದೆ:

  • ಶಿವಮೊಗ್ಗ: 349 ಮಿ.ಮೀ (ಶೇ 44 ಕೊರತೆ)
  • ಚಿಕ್ಕಮಗಳೂರು: 227 ಮಿ.ಮೀ (ಶೇ 48 ಕೊರತೆ)
  • ಕೊಡಗು: 349 ಮಿ.ಮೀ (ಶೇ 51 ಕೊರತೆ)
  • ಉಡುಪಿ: 861 ಮಿ.ಮೀ (ಶೇ 38 ಕೊರತೆ)
  • ದಕ್ಷಿಣ ಕನ್ನಡ: 668 ಮಿ.ಮೀ (ಶೇ 43 ಕೊರತೆ)
  • ಉತ್ತರ ಕನ್ನಡ: 627 ಮಿ.ಮೀ (ಶೇ 29 ಕೊರತೆ)
  • ಹಾಸನ: 143 ಮಿ.ಮೀ (ಶೇ 33 ಕೊರತೆ)
  • ಮೈಸೂರು: 54 ಮಿ.ಮೀ (ಶೇ 55 ಕೊರತೆ)
  • ಉತ್ತರ ಕರ್ನಾಟಕ ಭಾಗ: ಹಾವೇರಿ (ಶೇ 46), ದಾವಣಗೆರೆ (ಶೇ 47), ಕಲಬುರಗಿ (ಶೇ 43), ಬೀದರ್ (ಶೇ 40), ಕೊಪ್ಪಳ (ಶೇ 33), ರಾಯಚೂರು (ಶೇ 25), ಯಾದಗಿರಿ (ಶೇ 22), ಗದಗ (ಶೇ 22) ಹಾಗೂ ಧಾರವಾಡದಲ್ಲಿ ಶೇ 20ರಷ್ಟು ಮಳೆ ಕೊರತೆ ದಾಖಲಾಗಿದೆ.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಕುಮಾರಸ್ವಾಮಿ ಟೀಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು

Leave a Reply

Your email address will not be published. Required fields are marked *