ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ಆರೋಪ ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಈ ಅಕ್ರಮದ ಹಿಂದೆ ಸರ್ಕಾರದ ಕೈವಾಡವಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ಮುಂದುವರಿಸುವುದು ಅಥವಾ ರದ್ದುಗೊಳಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯೇ ಹೊರತು ಸರ್ಕಾರದ ಕೆಲಸವಲ್ಲ ಎಂದಿರುವ ಅವರು, ಕುಮಾರಸ್ವಾಮಿ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ತಮ್ಮ ಸರ್ಕಾರ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಾವಾಗಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಥವಾ ಇತರೆ ಸಚಿವರು ಮತ್ತು ಶಾಸಕರು ಸಾರ್ವಜನಿಕರ ಸಹಾಯಕ್ಕೆ ನಿಂತಿದ್ದಾರೆ. ಜನರಿಗೆ ನೆರವಾಗಲು ಪ್ರತಿ ಹಂತದಲ್ಲೂ ಬೂತ್ ಮಟ್ಟದ ಹೆಲ್ಪ್ಲೈನ್ಗಳನ್ನು ತೆರೆಯಲಾಗಿದೆ. ಇಂತಹ ಜನಪರವಾದ ಕಾರ್ಯವನ್ನು ಮೆಚ್ಚಿ ವಿರೋಧ ಪಕ್ಷದವರು ಅಭಿನಂದಿಸುವುದನ್ನು ಬಿಟ್ಟು, ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ, ತಾವು ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವುದನ್ನು ಸಿಎಂ ಒಪ್ಪಿಕೊಂಡಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದಂತೆ ಇಲ್ಲೂ ಸಹ ಬಡವರ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ದೊಡ್ಡ ಮಟ್ಟದ ಪಿತೂರಿಗಳು ನಡೆಯುತ್ತಿವೆ. ಈ ಕಾರಣಕ್ಕಾಗಿಯೇ ಜಾಗರೂಕರಾಗಿರಿ ಎಂದು ಶಾಸಕರಿಗೆ ಹೇಳಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಜೆಗಳ ಹಕ್ಕುಗಳನ್ನು ಕಾಪಾಡುವುದು ಹಾಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ತಮ್ಮ ಕರ್ತವ್ಯ ಎಂದಿರುವ ಸಿಎಂ, ವಿಪಕ್ಷಗಳ ಟೀಕೆಗಳಿಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ವಿರುದ್ದ ಹೆಚ್ಡಿಕೆ ಆರೋಪ
ಮತ್ತೊಂದೆಡೆ, ಈ ಇಡೀ ಪ್ರಕ್ರಿಯೆಯಲ್ಲಿ ಮೊದಲ ದಿನದಿಂದಲೂ ಕಾಂಗ್ರೆಸ್ ಸರ್ಕಾರವು ಅಕ್ರಮಗಳಿಗೆ ನೇರ ಸಾಥ್ ನೀಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ಪಕ್ಷವನ್ನು ಪ್ರಸನ್ನಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥಿತ ಹಗರಣದ ಇಂಚಿಂಚು ಮಾಹಿತಿ ಹಾಗೂ ಅಗತ್ಯ ಪುರಾವೆಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಅನ್ನು ಈಗಾಗಲೇ ತಾವು ಕೇಂದ್ರ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದು, ಈ ರಾಜಕೀಯ ಸಂಘರ್ಷ ರಾಜ್ಯದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಇದನ್ನೂ ಓದಿ: ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ ನೈಸ್ ರಸ್ತೆ ಮೂಲಕ ಹೊಸ ಬಿಎಂಟಿಸಿ ಎಸಿ ಬಸ್ ಸಂಚಾರ ಆರಂಭ
