ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ (Ram Mandir) ತೀರ್ಥ ಕ್ಷೇತ್ರ ಟ್ರಸ್ಟ್ನ ಮಹತ್ವದ ಸಭೆಯು ಸೋಮವಾರ ಮಧ್ಯಾಹ್ನ ಅಯೋಧ್ಯೆಯಲ್ಲಿ ನಡೆಯಲಿದ್ದು, ಇಡೀ ದೇಶದ ಗಮನ ಇದರತ್ತ ನೆಟ್ಟಿದೆ. ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿದ್ದ ದೇಣಿಗೆ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಇಂದಿನ ಸಭೆಯಲ್ಲಿ ಈ ರಾಜೀನಾಮೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ನಂತರ ನಡೆಯುತ್ತಿರುವ ಅತ್ಯಂತ ನಿರ್ಣಾಯಕ ಸಭೆ ಇದಾಗಿದ್ದು, ಟ್ರಸ್ಟ್ನ ಮುಂದಿನ ಪ್ರಧಾನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬುದು ಇದೇ ಸಭೆಯಲ್ಲಿ ನಿರ್ಧಾರವಾಗಲಿದೆ.
ಯಾರೆಲ್ಲಾ ಹೆಸರುಗಳು ಕೇಳಿ ಬರುತ್ತಿದೆ?
ಈ ಪ್ರಮುಖ ಹುದ್ದೆಗೆ ಪ್ರಸ್ತುತ ಮೂವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಪ್ರಧಾನ ಕಾರ್ಯದರ್ಶಿ, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ನಾಲ್ಕೊ (NALCO) ಸಂಸ್ಥೆಯ ಮಾಜಿ ಅಧ್ಯಕ್ಷರಾಗಿರುವ ಬಜರಂಗ್ ಬಾಗಡ್ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಇವರ ಜೊತೆಗೆ ರಾಮಮಂದಿರ ಚಳವಳಿಯಲ್ಲಿ ದೀರ್ಘಕಾಲದಿಂದ ಸಕ್ರಿಯವಾಗಿರುವ ಬಜರಂಗದಳದ ರಾಷ್ಟ್ರೀಯ ಸಂಚಾಲಕ ನೀರಜ್ ದೌನೇರಿಯಾ ಮತ್ತು ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ನಿವೃತ್ತ ಅಧಿಕಾರಿ ಹಾಗೂ ಪೂರ್ವ ಉತ್ತರ ಪ್ರದೇಶದ ಆರ್ಎಸ್ಎಸ್ ಮಾಜಿ ಸಂಘಚಾಲಕ ಕೃಷ್ಣ ಮೋಹನ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿವೆ. ಟ್ರಸ್ಟ್ನ ಸದಸ್ಯರು ಈ ಮೂವರ ಹಿನ್ನೆಲೆಯನ್ನು ಪರಿಶೀಲಿಸಿ ಒಬ್ಬರನ್ನು ಅಂತಿಮಗೊಳಿಸಲಿದ್ದಾರೆ.
ಭದ್ರತಾ ಕಾರಣಗಳು ಮತ್ತು ಮಾಧ್ಯಮಗಳ ಅತಿಯಾದ ಜಮಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊನೆ ಕ್ಷಣದಲ್ಲಿ ಸಭೆಯ ಸ್ಥಳವನ್ನು ಬದಲಾಯಿಸಲಾಗಿದೆ. ಮೊದಲು ಮಣಿ ರಾಮ್ ದಾಸ್ ಛಾವಣಿಯಲ್ಲಿ ನಿಗದಿಯಾಗಿದ್ದ ಈ ಸಭೆಯನ್ನು ಈಗ ರಾಮಮಂದಿರ ಸಂಕೀರ್ಣದ ಒಳಗಿರುವ ಅತಿಥಿಗೃಹಕ್ಕೆ ಸ್ಥಳಾಂತರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಬಹುತೇಕ ಟ್ರಸ್ಟಿಗಳು ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಹಿರಿಯ ನ್ಯಾಯವಾದಿ ಕೆ. ಪರಾಶರನ್ ಅವರು ಆನ್ಲೈನ್ ಮೂಲಕ ಸಭೆಗೆ ಹಾಜರಾಗಲಿದ್ದು, ವಿವಾದದ ಕೇಂದ್ರಬಿಂದುವಾಗಿರುವ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಕೂಡ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ರಾಜೀನಾಮೆ ನೀಡಿದ್ದ ಚಂಪತ್ ರೈ
ರಾಜೀನಾಮೆ ವಿಚಾರದ ಜೊತೆಗೆ, ದೇಣಿಗೆ ಕಳ್ಳತನದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ಮಧ್ಯಂತರ ವರದಿಯ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುವುದು. ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಜೂನ್ 26 ರಂದು ಚಂಪತ್ ರೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಈ ಇಬ್ಬರೂ ನಾಯಕರನ್ನು ಅಯೋಧ್ಯಾ ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ಇದರೊಂದಿಗೆ, ರಾಮಮಂದಿರದ ದೈನಂದಿನ ಆಡಳಿತವನ್ನು ಇನ್ನು ಮುಂದೆ ಸುಗಮವಾಗಿ ನಡೆಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (CEO) ನೇಮಿಸುವ ಬಗ್ಗೆಯೂ ಸಭೆಯಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಯಿದ್ದು, ಆಡಳಿತದ ಪ್ರಮುಖ ಅಧಿಕಾರಗಳನ್ನು ಈ ಹೊಸ ಹುದ್ದೆಗೆ ಹಸ್ತಾಂತರಿಸಲು ಯೋಜಿಸಲಾಗಿದೆ.
