ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಸ್ಮಾರ್ಟ್ ಟೌನ್‌ಶಿಪ್ (Bidadi Township) ಯೋಜನೆಯ ಸುತ್ತಲಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಪತ್ರ ಸಮರ ಮತ್ತು ಸವಾಲುಗಳ ಬೆನ್ನಲ್ಲೇ, ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಡಿಎಸ್ ನಾಯಕನಿಗೆ ಹೊಸ ಸವಾಲೊಂದನ್ನು ಎಸೆದಿದ್ದಾರೆ. ಬಿಡದಿ ಟೌನ್‌ಶಿಪ್ ನಿಮ್ಮದೇ ಕನಸಿನ ಕೂಸು ಹೌದೋ ಅಲ್ವೋ ಎಂಬುದನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೆ ಬಂದು ಆಣೆ ಮಾಡಿ ಹೇಳಿ ಎಂದು ಅವರು ಬಹಿರಂಗವಾಗಿ ಪಂಥಾಹ್ವಾನ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಕ್ರಾಸ್ ವೋಟಿಂಗ್ (ಅಡ್ಡಮತದಾನ) ಗೊಂದಲ ನಿವಾರಿಸಲು ಇತ್ತೀಚೆಗಷ್ಟೇ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸಲು ಮುಂದಾಗಿ, ನಂತರ ಹಿರಿಯರ ಒತ್ತಡಕ್ಕೆ ಮಣಿದು ಹಿಂದೆ ಸರಿದಿದ್ದರು. ಬಿಜೆಪಿ ಸೃಷ್ಟಿಸಿದ್ದ ಈ ಧರ್ಮಸ್ಥಳದ ವಿವಾದದ ಬೆನ್ನಲ್ಲೇ, ಈಗ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಅದೇ ಅಸ್ತ್ರವನ್ನು ಬಳಸಿ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿರುವುದು ರಾಮನಗರ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ನಿಮ್ಮದೇ ಯೋಜನೆಗೆ ಈಗ ಡ್ರಾಮಾ ಮಾಡುತ್ತಿದ್ದೀರಾ?: ಬಾಲಕೃಷ್ಣ ಕಿಡಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ, “ಬಿಡದಿ ಟೌನ್‌ಶಿಪ್ ಯೋಜನೆ ಎನ್ನುವುದು ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರೇ ಸ್ವತಃ ಆಸಕ್ತಿ ವಹಿಸಿ ರೂಪಿಸಿದ ಬೃಹತ್ ಪ್ರಾಜೆಕ್ಟ್ ಆಗಿದೆ. ಆದರೆ, ಈಗ ನಮ್ಮ ಸರ್ಕಾರ ಅದೇ ಯೋಜನೆಗೆ ಚಾಲನೆ ನೀಡಲು ಮುಂದಾದರೆ, ಅವರು ರೈತರ ಹೆಸರಿನಲ್ಲಿ ದೊಡ್ಡ ನಾಟಕ ಆಡುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಣ ನೀಡಿ ಜನರನ್ನು ಕರೆತಂದು ಬಿಡದಿ ಮತ್ತು ಬೈರಮಂಗಲ ಭಾಗದಲ್ಲಿ ಕೃತಕವಾಗಿ ಪ್ರತಿಭಟನೆಗಳನ್ನು ಮಾಡಿಸುತ್ತಿದ್ದಾರೆ. ಅವರಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಬಿಡದಿ ಟೌನ್‌ಶಿಪ್ ತಮ್ಮದೇ ಕಲ್ಪನೆಯ ಯೋಜನೆ ಹೌದಾ ಅಥವಾ ಅಲ್ವಾ ಎಂಬ ಸತ್ಯವನ್ನು ಧರ್ಮಸ್ಥಳದ ಪವಿತ್ರ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುವ ಮೂಲಕ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚರ್ಚೆಗೆ ಬರುವಂತೆ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದಿದ್ದ ಕುಮಾರಸ್ವಾಮಿ, ಬೈರಮಂಗಲದ ಮುಕ್ತ ಸಾರ್ವಜನಿಕ ಸ್ಥಳದಲ್ಲಿ ರೈತರ ಸಮ್ಮುಖದಲ್ಲೇ ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದರು. ಇದೀಗ ಕಾಂಗ್ರೆಸ್ ಶಾಸಕರು ಅದಕ್ಕೆ ಧರ್ಮಸ್ಥಳದ ಆಣೆ-ಪ್ರಮಾಣದ ಹೊಸ ಆಯಾಮ ನೀಡಿರುವುದರಿಂದ ರಾಜಕೀಯ ಕಣ ಮತ್ತಷ್ಟು ರಂಗೇರಿದೆ. ಶಾಸಕ ಬಾಲಕೃಷ್ಣ ಅವರ ಈ ಧರ್ಮಸ್ಥಳದ ಸವಾಲಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
