ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಆಶೀರ್ವಾದ ಹಾಗೂ ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಸುದೀರ್ಘ ಕಾಲ ಭೀಕರ ದೌರ್ಜನ್ಯ ಎಸಗುತ್ತಿದ್ದ ನಕಲಿ ಬಾಬಾನ (Crime) ಅಸಲಿ ಮುಖವಾಡ ಕಳಚಿಬಿದ್ದಿದೆ. ತಾನು ಸಾಕ್ಷಾತ್ ದೇವರ ಅವತಾರ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತನನ್ನು ಪುಣೆ ಪೊಲೀಸರು ಕಡೆಗೂ ಬಂಧಿಸಿದ್ದಾರೆ. ಈತ ಹಾಗೂ ಇವನ ಸಹಚರರು ಸೇರಿ ನೊಂದ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ, ಎಲೆಕ್ಟ್ರಿಕ್ ಶಾಕ್ ನೀಡಿ ಜೀವರಕ್ಷಕ ಯಾತನೆ ಕೊಟ್ಟಿರುವ ದಿಗಿಲು ಮೂಡಿಸುವ ಸತ್ಯ ತನಿಖೆಯಲ್ಲಿ ಬಹಿರಂಗಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಪತಿಯಿಂದ ವಿಚ್ಛೇದನ ಕೊಡಿಸಿದ್ದ ಸ್ವಾಮೀಜಿ
ಆರೋಪಿ ರಾಧೇಶ್ಯಾಮ್ ಪುಣೆಯ ವಾಗೋಲಿ ಸಮೀಪದ ಉಬಾಲೆ ನಗರದಲ್ಲಿ ‘ಮಾಡರ್ನ್ ಗುರುಕುಲ’ ಎನ್ನುವ ಆಶ್ರಮ ತೆರೆದು ಅದರ ಮರೆಯಲ್ಲಿ ಇಂತಹ ದಂಧೆ ನಡೆಸುತ್ತಿದ್ದ. ಸುಮಾರು 2010ರ ಅವಧಿಯಲ್ಲಿ ಈತನ ಮಾಯದ ಮಾತುಗಳಿಗೆ ಮರುಳಾಗಿದ್ದ ಮಹಿಳೆಯೊಬ್ಬರು ಆಶ್ರಮದ ಸಂಪರ್ಕಕ್ಕೆ ಬಂದಿದ್ದರು. ಅಂದಿನಿಂದ ಸಂತ್ರಸ್ತೆಯನ್ನು ಅವರ ಸ್ವಂತ ಕುಟುಂಬದಿಂದ ದೂರವಿಟ್ಟಿದ್ದ ಈ ಬಾಬಾ, ಹೆದರಿಸಿ ಆಕೆಯ ಪತಿಯಿಂದ ವಿಚ್ಛೇದನ ಕೊಡಿಸಿದ್ದನು. ತದನಂತರ ಸುಮಾರು ಆರು ವರ್ಷಗಳ ಕಾಲ ಆಕೆಯ ಮೇಲೆ ನಿರಂತರ ಲೈಂಗಿಕ ಶೋಷಣೆ ನಡೆಸಿದ್ದನು. ಅಷ್ಟೇ ಅಲ್ಲದೆ, ಮಹಿಳೆಯ ಅಶ್ಲೀಲ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹಾಗೂ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಇಡೀ ಕುಟುಂಬಕ್ಕೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದ. ಆಶ್ರಮದ ಖಜಾನೆ ತುಂಬಿಸಲು ಬಾಲಕಿಯಂತೆ ಇದ್ದ ಆಕೆಯ ಕೈಯಿಂದಲೇ ಹಲವೆಡೆ ಕಳ್ಳತನ ಮಾಡಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಶ್ರಮದ ರಹಸ್ಯ ಸುರಂಗ ಪತ್ತೆ: ಭಾರಿ ಪ್ರಮಾಣದ ತಾಂತ್ರಿಕ ವಸ್ತುಗಳು ಜಪ್ತಿ
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಶ್ರಮದ ಮೇಲೆ ಸಡನ್ ರೈಡ್ ಮಾಡಿದ್ದು, ಅಲ್ಲಿ ಇರುತ್ತಿದ್ದ ರಹಸ್ಯ ಭೂಗತ ಕೋಣೆಯನ್ನು ಪತ್ತೆಹಚ್ಚಿದ್ದಾರೆ. ಈ ಕತ್ತಲೆ ಕೋಣೆಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಹಲವಾರು ಆಕ್ಷೇಪಾರ್ಹ ವಸ್ತುಗಳು ಸೇರಿದಂತೆ 12 ಲ್ಯಾಪ್‌ಟಾಪ್, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡಿಸ್ಕ್‌ಗಳು ಹಾಗೂ ವಿಡಿಯೋ ಕ್ಯಾಸೆಟ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳ ಜೊತೆಗೆ 6.5 ಲಕ್ಷ ರೂಪಾಯಿ ನಗದು, 15 ಲಕ್ಷ ಮೌಲ್ಯದ ಒಡವೆಗಳು ಹಾಗೂ ನಿಷೇಧಿತ ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವ್ಯವಸ್ಥಿತ ಜಾಲದಲ್ಲಿ ಬಾಬಾನಿಗೆ ಸಾಥ್ ನೀಡುತ್ತಿದ್ದ ಆತನ ಮುಖ್ಯ ಸಹಚರ ‘ಸ್ವಾಮಿ’ ಕನ್ವಲ್ ನಯನ್ ಒಳಗೊಂಡಂತೆ ಎಂಟು ಜನ ಸದ್ಯ ಲಾಕಪ್ ಸೇರಿದ್ದಾರೆ. ಈ ವಿಕೃತ ಸ್ವಾಮೀಜಿಯ ಆಶ್ರಮದಲ್ಲಿ ಇನ್ನೂ ಹತ್ತಾರು ಮಹಿಳೆಯರು ಇಂತಹದ್ದೇ ಶೋಷಣೆಗೆ ಒಳಗಾಗಿ ನರಳುತ್ತಿರುವ ಶಂಕೆಯಿದ್ದು, ತನಿಖೆ ತೀವ್ರಗೊಂಡಂತೆ ಉಳಿದ ಸಂತ್ರಸ್ತರು ದೂರು ನೀಡಲು ಮುಂದೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಳ್ಳಲಾದ ಡಿಜಿಟಲ್ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನೂ ಓದಿ: ಐನಾಕ್ಸ್ ಕಂಪನಿಗೆ ‘ಬಾಸ್’ ಹೆಸರಲ್ಲಿ 10.4 ಕೋಟಿ ರೂ. ಸೈಬರ್ ವಂಚನೆ
