ಸಾಗರ: ತಾಲೂಕಿನ ಕಳೂರು ಮತ್ತು ಚದರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ತೀವ್ರ ಶಿಕ್ಷಕರ ಕೊರತೆ ಎದುರಾಗಿದ್ದು, ಇದರಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಪದಾಧಿಕಾರಿಗಳು ಇಂದು (Sagara) ಶಾಲಾ ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.
30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ
ಈ ಭಾಗದ ಸುಮಾರು 30 ರಿಂದ 40 ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರ ಕೊರತೆ ದೊಡ್ಡ ಕಂಠಕವಾಗಿ ಪರಿಣಮಿಸಿದೆ. ಈ ಗಂಭೀರ ಸಮಸ್ಯೆಯ ಕುರಿತು ಕಳೆದ ಮೂರು ವರ್ಷಗಳಿಂದ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಗಮನಕ್ಕೆ ಎರಡು ಮೂರು ಬಾರಿ ತಂದಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಓಂಕಾರ ಜೈನ್ ಎಕ್ಸ್ಎಲ್, “ಕರೂರು ಹೋಬಳಿಯ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಅವರು ಯಾವುದೇ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಬೇಸರದ ಸಂಗತಿ,” ಎಂದು ಶಿಕ್ಷಣ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಶಿಕ್ಷಕರ ನೇಮಕದ ಭರವಸೆ ನೀಡಿದ ECO ಹಾಗೂ CRP
ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಇಸಿಒ ದಿನೇಶ್ ಹಾಗೂ ಸಿಆರ್ಪಿ ರಮೇಶ್ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಶಾಲೆಗಳಿಗೆ ಶೀಘ್ರದಲ್ಲೇ ಶಿಕ್ಷಕರನ್ನು ನೇಮಕ ಮಾಡುವ ಕುರಿತು ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಓಂಕಾರ ಜೈನ್ ಎಕ್ಸ್ಎಲ್, ಪ್ರಮುಖರಾದ ಕೆ.ಎಸ್. ಓಂಕಾರ, ಭೀಮಾನಾಯ್ಕ್, ಸತೀಶ್ ನಾಯ್ಕ, ರೇಣುಕಾ, ಆದಿರಾಜ್, ರಾಜೇಶ್, ನಾಗರಾಜ್ ಮುತ್ತತ್ತಿ, ಮೋಹನ್, ಲೋಕಪಾಲ್, ರಾಜೇಶ್ ಸೇರಿದಂತೆ ಹಲವು ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು, ಶಾಲೆಯ ಉಳಿವಿಗಾಗಿ ಧ್ವನಿ ಎತ್ತಿದರು.
ಇದನ್ನೂ ಓದಿ: ಮೂಕಾಂಬಿಕೆ ದರ್ಶನ ಪಡೆದ ದಳಪತಿ ಸಿಎಂ ವಿಜಯ್
ವರದಿ: ಪ್ರಶಾಂತ್ ಭಟ್
